ಜಿಲ್ಲೆ

ತ್ರಿಬಲ್​ ರೈಡಿಂಗ್: ಪೊಲೀಸರನ್ನು ಕಂಡೊಡನೆ ಹೆದರಿ ದಿಢೀರ್​ ಯೂಟರ್ನ್ ತಗೆದುಕೊಂಡ ಕ್ಷಣದಲ್ಲೇ ದುರಂತ ಸಾವು

ಮೈಸೂರು: ತ್ರಿಬಲ್ ರೈಡಿಂಗ್​ನಲ್ಲಿ ಹೋಗುತ್ತಿದ್ದ ಮೂವರು ಯುವಕರು ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಅಪಘಾತಕ್ಕೀಡಾಗಿದ್ದಾರೆ. ಈ ದುರ್ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಮೃತಟ್ಟಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ.

ಇಂತಹ ಭೀಕರ ಅಪಘಾತ ನಂಜನಗೂಡು ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದೆ. ಕೂಡ್ಲಾಪುರದ ಸಚಿನ್ ಮತ್ತು ಉತ್ತನಹಳ್ಳಿಯ ದೊರೆಸ್ವಾಮಿ ಮೃತ ದುರ್ದೈವಿಗಳು.

ನಂಜನಗೂಡಿನ ಸಿಂಧುವಳ್ಳಿ ಬಳಿಯ ಹುಣಸನಾಳು ಗ್ರಾಮಕ್ಕೆ ಮೂವರು ಯುವಕರು ಬೈಕ್​ನಲ್ಲಿ ಹೋಗುತ್ತಿದ್ದರು. ಮಾರ್ಗಮಧ್ಯೆ ರಸ್ತೆಯಲ್ಲಿ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದರು. ಇದನ್ನು ಗಮನಿಸಿದ ಯುವಕರು ಪೊಲೀಸರಿಂದ ತಪ್ಪಿಸಿಕೊಳ್ಳಲು ಏಕಾಏಕಿ ಯೂ ಟರ್ನ್ ತೆಗೆದುಕೊಳ್ಳಲು ಹೋಗಿದ್ದಾರೆ. ಹಿಂಬದಿಯಿಂದ ಬರುತ್ತಿದ್ದ ಕೆಎಸ್​ಆರ್​ಟಿಸಿ ಬಸ್​ಗೆ ಬೈಕ್​ ಡಿಕ್ಕಿಯಾಗಿದ್ದು, ಯುವಕರಿಬ್ಬರ ದೇಹದ ಕೆಲ ಭಾಗ ಛಿದ್ರವಾಗಿ ಸ್ಥಳದಲ್ಲೇ ದುರಂತ ಅಂತ್ಯಕಂಡಿದ್ದಾರೆ. ಮತ್ತೊಬ್ಬ ಯುವಕ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ.