ಜಿಲ್ಲೆ

ಜೀವನದ ಜಡತ್ವ ಕಳೆದು ಜೀವನೋತ್ಸಾಹ ನೀಡುವ ಚಾರಣ

ಬಣಕಲ್: ಪ್ರಕೃತಿಯ ಸೌಂದರ್ಯವನ್ನು ಅನುಭವಿಸುತ್ತಾ ಮಾಡುವ ಚಾರಣದಿಂದ ಬದುಕಿನ ಜಡತೆ ಕಳೆದು ಜೀವನೋತ್ಸಾಹ ವೃದ್ಧಿಯಾಗುತ್ತದೆ ಎಂದು ಕನ್ನಡ ಮತ್ತ ಸಂಸ್ಕೃತಿ ಇಲಾಖೆ ಹಿರಿಯ ಸೂಪರ್‌ವೈಸರ್ ಶ್ರೀನಿವಾಸ್ ಹೇಳಿದರು.

ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಿಂದ ತೇಜಸ್ವಿ ಪ್ರತಿಷ್ಠಾನದಿಂದ ಬಿದಿರುತಳಕ್ಕೆ ಹಮ್ಮಿಕೊಂಡಿದ್ದ ಮಳೆನಡಿಗೆ ಮತ್ತು ತೇಜಸ್ವಿ ಓದು ಕಾರ್ಯಕ್ರಮದಲ್ಲಿ ಮಾತನಾಡಿ, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ವಸ್ತು ಸಂಗ್ರಹಾಲಯ, ಕೀಟ ಸಂಗ್ರಹಾಲಯ ವೀಕ್ಷಿಸಿ ಗಾಜಿನ ಮನೆಯಲ್ಲಿ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತಾ ಪುಸ್ತಕ ಓದುವುದು ಅಪೂರ್ವ ಅನುಭವ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಇಲ್ಲಿ ಪಶ್ಚಿಮ ಘಟ್ಟಗಳಲ್ಲಿ ಕಾಣಸಿಗುವ ಅಪರೂಪದ ಆರ್ಕಿಡ್‌ಗಳ ಸಂಗ್ರಹಾಲಯ, ಚಿಟ್ಟೆ ಉದ್ಯಾನವನ ನಿರ್ಮಾಣವಾಗಲಿದೆ ಎಂದರು.

ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಿಂದ ಆಯೋಜಿಸುವ ಚಾರಣಗಳು ಮನೋರಂಜನೆಗೆ ಸೀಮಿತವಾಗಿರದೇ ಪ್ರಕೃತಿ ಅಧ್ಯಯನ ಪ್ರಮುಖ ಉದ್ದೇಶವನ್ನು ಹೊಂದಿರುತ್ತದೆ. ಚಾರಣ ಸಾಗುವ ದಾರಿಯಲ್ಲಿ ಕಾಣಸಿಗುವ ಅಪರೂಪದ ಕೀಟಗಳು, ಸಸ್ಯ ಸಂಕುಲಗಳನ್ನು ಗಮನಿಸುತ್ತಾ ಅವುಗಳ ಸಂರಕ್ಷಣೆ ಮತ್ತು ಮಹತ್ವವನ್ನು ಅರಿಯಲು ಚಾರಣ ಸಹಾಯಕವಾಗಿದೆ ಎಂದರು.

ಗಸ್ತು ಅರಣ್ಯ ಪಾಲಕರಾದ ಉಮೇಶ್ ಮತ್ತು ಅಭಿಜಿತ್ ಚಾರಣಿಗರು ಅನುಸರಿಸಬೇಕಾದ ನಿಯಮಗಳ ಕುರಿತು ಮಾಹಿತಿ ನೀಡಿದರು. ಬಿದಿರುತಳದ ಕಾಡುದಾರಿಯಲ್ಲಿ ಸಾಗಿದ ಚಾರಣಿಗರು ಕಾಡಿನ ನಡುವಿನ ಸುಂದರೇಶ್ ಅವರ ಮನೆಯಲ್ಲಿ ಮಲೆನಾಡಿನ ವಿಶೇಷ ಬರಗಾಫಿ, ಹಲಸಿನಹಣ್ಣು ಜೇನು, ಮಧ್ಯಾಹ್ನ ಕೆಸುವಿನ ಪಲ್ಯ, ಪಾಯಸದ ಊಟ, ಸಂಜೆ ಪಕೋಡ ಸೇವಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ತಾಂತ್ರಿಕ ಸಹಾಯಕ ನವದೀಪ್, ತೇಜಸ್ವಿ ಪ್ರತಿಷ್ಠಾನದ ತಾಂತ್ರಿಕ ಸಹಾಯಕ ಪ್ರಜ್ವಲ್, ಸಂಯೋಜಕ ನಂದೀಶ್ ಬಂಕೇನಹಳ್ಳಿ, ಸಿಬ್ಬಂದಿಗಳಾದ ಸತೀಶ್, ಸಂಗೀತಾ, ಕೀಟತಜ್ಞ ಡಾ.ಅವಿನಾಶ್, ಸ್ಥಳೀಯರಾದ ಸುಂದರೇಶ್ ಬಂಕೇನಹಳ್ಳಿ, ಸುಬ್ಬರಾಯ ಬಿದಿರುತಳ, ಸುಧಾಕರ್, ಹರೀಶ್, ಸುನೀಲ್, ಶ್ರೀಕಾಂತ್, ಪೂರ್ಣೇಶ್, ಶಂಕುತಲ, ಮಮತಾ, ಗಂಗಾಧರಪ್ಪ ಮುಂತಾದವರು ಇದ್ದರು.