ಬಾಳೆಹೊನ್ನೂರು-ಮೇಲ್ಪಾಲ್ ಸಂಪರ್ಕ ಕಲ್ಪಿಸುವ ಅರಳೀಕೊಪ್ಪ-ಕೋಣೆಮನೆ ಎಂಬಲ್ಲಿ ರಸ್ತೆಗೆ ಬೃಹತ್ ಗಾತ್ರದ ಮರ ಬಿದ್ದಿರುವುದು. 
ಜಿಲ್ಲೆ

ರಸ್ತೆಗೆ ಮರ ಬಿದ್ದು ಸಂಚಾರ ಸ್ಥಗಿತ

ಬಾಳೆಹೊನ್ನೂರು: ಬಾಳೆಹೊನ್ನೂರಿನಿಂದ ಮೇಲ್ಪಾಲ್‌ಗೆ ತೆರಳುವ ಅರಳೀಕೊಪ್ಪ-ಕೋಣೆಮನೆ ಬಳಿ ಗುರುವಾರ ರಾತ್ರಿ ಬೃಹತ್ ಮರ ರಸ್ತೆಗೆ ಬಿದ್ದು ಶುಕ್ರವಾರ ಮಧ್ಯಾಹ್ನದವರೆಗೆ ಸಂಚಾರ ಸ್ಥಗಿತಗೊಂಡಿತ್ತು.

ಅರಳೀಕೊಪ್ಪ-ಕೋಣೆಮನೆ ನಡುವಿನ ಮುಖ್ಯರಸ್ತೆಯಲ್ಲಿ ಗುರುವಾರ ರಾತ್ರಿ 9 ಗಂಟೆ ವೇಳೆಗೆ ಬೃಹತ್ ಗಾತ್ರದ ಹೆಬ್ಬಲಸಿನ ಮರ ಎರಡು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಬೇರು ಸಡಿಲಗೊಂಡು ಬುಡ ಸಮೇತ ಬಿದ್ದಿದೆ.
ಬೃಹತ್ ಮರ ಬಿದ್ದ ಪರಿಣಾಮ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಬಸ್ ಸೇರಿದಂತೆ ಹಲವು ವಾಹನಗಳು ಪರ್ಯಾಯ ರಸ್ತೆ ಮೂಲಕ ಬಾಳೆಹೊನ್ನೂರು, ಕೊಪ್ಪಕ್ಕೆ ತೆರಳಿದವು. ಮರ ಬಿದ್ದಿದ್ದರಿಂದ ಸಮೀಪದ ಅಡಕೆ ತೋಟಕ್ಕೆ ಸ್ವಲ್ಪ ಪ್ರಮಾಣದಲ್ಲಿ ಹಾನಿಯಾಗಿದೆ.
ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರು ಸ್ಥಳೀಯರ ಸಹಕಾರದಿಂದ ಮರ ತೆರವುಗೊಳಿಸಿದರು. ಶುಕ್ರವಾರ ಮಧ್ಯಾಹ್ನ ಒಂದು ಗಂಟೆ ವೇಳೆಗೆ ಸಂಚಾರ ಪುನಾರಂಭಗೊಂಡಿತು.
ಬಾಳೆಹೊನ್ನೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶುಕ್ರವಾರ ಮಧ್ಯಾಹ್ನ ಸಾಧಾರಣ ಮಳೆಯಾಯಿತು. ಮಧ್ಯಾಹ್ನ ಮೂರು ಗಂಟೆಯಿಂದ ಒಂದು ತಾಸು ಹದವಾದ ಮಳೆಯಾಗಿದೆ.