ಸೋಮವಾರಪೇಟೆ: ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದ ಪೊಲೀಸ್ ಪೇದೆ ಬೈಕ್ ಮೇಲೆ ದಿಢೀರ್ ಮರ ಬಿದ್ದಿದ್ದು, ಸಣ್ಣ ಪುಟ್ಟ ಗಾಯದೊಂದಿಗೆ ಅವರು ಪ್ರಾಣಾಪಾಯದಿಂದ ಪಾರಾದ ಘಟನೆ ಸೋಮವಾರ ಬೆಳಗ್ಗೆ ತಣ್ಣೀರುಹಳ್ಳ ಜಂಕ್ಷನ್‌ನ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.
ಇಲ್ಲಿನ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಳಗುಂದ ಗ್ರಾಮದ ಶಶಿಕುಮಾರ್ ಗಾಯಾಳು. ರಾತ್ರಿ ಪಾಳಿಯ ಕರ್ತವ್ಯ ಮುಗಿಸಿ ಸೋಮವಾರ ಬೆಳಗ್ಗೆ ತಮ್ಮ ಬೈಕ್‌ನಲ್ಲಿ ಮನೆಗೆ ತೆರುಳುತ್ತಿದ್ದಾಗ ತಣ್ಣೀರುಹಳ್ಳ ಗ್ರಾಮದ ಬಳಿಯಿರುವ ಕಾಫಿ ತೋಟದಲ್ಲಿದ್ದ ಸಿಲ್ವರ್ ಮರ ಭಾರಿ ಗಾಳಿಗೆ ಬೈಕ್ ಮೇಲೆ ಬಿದ್ದಿದೆ.
ಬೈಕ್‌ನ ಮುಂಭಾಗಕ್ಕೆ ಮರ ಬಿದ್ದ ಹಿನ್ನೆಲೆ ಪೊಲೀಸ್ ಪೇದೆ ರಸ್ತೆಗೆ ಬಿದ್ದಿದ್ದು, ಎರಡೂ ಕಾಲಿಗೆ ಪೆಟ್ಟಾಗಿದೆ. ಹೆಲ್ಮೆಟ್ ಧರಿಸಿದ್ದರಿಂದ ತಲೆ ಭಾಗಕ್ಕೆ ಪೆಟ್ಟಾಗದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಅಧಿಕಾರಿ ಸುರೇಶ್, ಸಿಬ್ಬಂದಿ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.