ಜಿಲ್ಲೆ

ಪ್ರಯಾಣಿಕರ ಸೇವೆ ಮರೆತ ಸಾರಿಗೆ ಸಂಸ್ಥೆ

ಮುಳಬಾಗಿಲು: ಸಂಜೆಯಾಗುತ್ತಲೇ ಸೇವೆಯನ್ನು ಸ್ಥಬ್ಧಗೊಳಿಸುವ ಸಾರಿಗೆ ಸಂಸ್ಥೆ ಮುಳಬಾಗಿಲು ಜನರನ್ನು ಮರೆತಿರುವುದರಿಂದ ಪ್ರಯಾಣಿಕರ ಪರದಾಟ ಸಾಮಾನ್ಯವಾಗಿದೆ.

ಕರೊನಾ ಕಾಲಘಟ್ಟದಲ್ಲಿ ಮುಚ್ಚಿದ್ದ ಸಾರಿಗೆ ಸೇವೆ ನಂತರ ಹಂತ ಹಂತವಾಗಿ ಚೇತರಿಕೆ ಕಂಡು ಸುಧಾರಿಸುವ ವೇಳೆಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್​ ಸರ್ಕಾರ ಶಕ್ತಿ ಯೋಜನೆ ಜಾರಿಗೆ ತಂದ ಪರಿಣಾಮ ಜನ ಕೆಎಸ್​ಆರ್​ಟಿಸಿ ಬಸ್​ನತ್ತ ಮುಖ ಮಾಡಿದ್ದು, ಜತೆಗೆ ಹೆಚ್ಚುವರಿ ಪ್ರಯಾಣಿಕರ ಸಂಚಾರದಿಂದ ಸಾರಿಗೆ ಸಂಸ್ಥೆಗೆ ಮತ್ತಷ್ಟು ಶಕ್ತಿ ದೊರಕಿದೆ.

ಶಕ್ತಿ ಯೋಜನೆ ಜಾರಿ ನಂತರ ಖಾಸಗಿ ಬಸ್​ಗಳ ಆದಾಯಕ್ಕೆ ಹೊಡೆತ ಬಿದ್ದು, ಈಗ ಖಾಸಗಿಯೂ ಇಲ್ಲ&ಸರ್ಕಾರಿ ಸಾರಿಗೆಯು ಇಲ್ಲದೇ ಅಡಕತ್ತರಿಯಲ್ಲಿ ಸಿಕ್ಕಾಕಿಕೊಂಡಂತಾಗಿದೆ ಮೂಡಲಬಾಗಿಲು ಪ್ರಯಾಣಿಕರ ದುಸ್ಥಿತಿ.

ರಾತ್ರಿ 7.30ಕ್ಕೆ ಕೋಲಾರಕ್ಕೆ ಮುಳಬಾಗಿಲು ಘಟಕದ ಸಾರಿಗೆ ಬಸ್​ ಕೊನೇ ಟ್ರಿಪ್​ ಆಗಿದ್ದು, ಅನಂತರ ಕೋಲಾರ ಮತ್ತು ಬೆಂಗಳೂರಿಗೆ ಪ್ರಯಾಣ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಉದ್ಭವವಾಗಿದೆ. ಅದರಲ್ಲೂ ಭಾನುವಾರ ರಾತ್ರಿ ಬೆಂಗಳೂರು, ಕೋಲಾರ ಪ್ರಯಾಣ ಮಾಡುವುದೇ ಹರಸಾಹಸವಾಗಿದೆ.

ನೇರ ಬಸ್​ಗೂ ಕೊಕ್ಕೆ: ಈ ಮೊದಲು ಬೆಳಗ್ಗೆ 9 ಗಂಟೆವರೆಗೂ ಮತ್ತು ಸಂಜೆ 4 ರಿಂದ 6 ಗಂಟೆವರೆಗೂ ಮುಳಬಾಗಿಲಿನಿಂದ ಬೆಂಗಳೂರಿಗೆ ನೇರ ಬಸ್​ ವ್ಯವಸ್ಥೆ ಇದ್ದು, ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗಿತ್ತು. ಈಗ ಈ ಬಸ್​ಗಳಿಗೆ ಕೊಕ್ಕೆ ಹಾಕಿ ಕೋಲಾರ, ನರಸಾಪುರಕ್ಕೆ ಹೋಗಬೇಕೆಂಬ ಷರತ್ತು ವಿಧಿಸಿದ್ದರಿಂದ ಬೆಂಗಳೂರಿಗೆ ಹೋಗಲು 1 ಗಂಟೆ ಹೆಚ್ಚುವರಿ ಸಮಯ ತೆಗೆದುಕೊಳ್ಳುತ್ತದೆ. ನೇರ ಬಸ್​ನಲ್ಲಿ 2.30 ರಿಂದ 3 ಗಂಟೆ ಪ್ರಯಾಣ ಇದ್ದರೆ. ಕೋಲಾರ&ನರಸಾಪುರಕ್ಕೆ ಸುತ್ತಿಬಳಸಿ ಹೋಗುವ ಬಸ್​ಗಳು ಬೆಂಗಳೂರು ತಲುಪಲು 4 ಗಂಟೆ ಬೇಕಿದೆ. ವೇಗದೂತ ಬಸ್​ಗಳು ಕೋಲಾರ, ನರಸಾಪುರ, ತಾವರೆಕೆರೆ, ಹೊಸಕೋಟೆ ಮಾರ್ಗವಾಗಿ ಬೆಂಗಳೂರಿಗೆ ಹೋಗಿ ಬರುತ್ತಿದ್ದು, ಈ ಬಸ್​ ಹೊರತುಪಡಿಸಿ ನೇರ ಬಸ್​ ವ್ಯವಸ್ಥೆ ಈ ಹಿಂದೆ ಇದ್ದಂತೆ ನಿಗದಿಪಡಿಸಿದರೆ ಸಂಚಾರಕ್ಕೆ ಅನುಕೂಲವಾಗಲಿದೆ ಎನ್ನುತ್ತಾರೆ ಸ್ಥಳಿಯರು.

ಗ್ರಾಮೀಣ ಪ್ರದೇಶಕ್ಕೂ ಸೇವೆ ಕಡಿತ

ಮುಳಬಾಗಿಲು ಘಟಕದಲ್ಲಿ 101 ಬಸ್​ಗಳಿದ್ದು, 92 ಮಾರ್ಗಗಳಲ್ಲಿ ಸಂಚರಿಸುತ್ತಿದ್ದು, ಇದರಲ್ಲಿ ಬಹುತೇಕ ಹೊರಜಿಲ್ಲೆ ಅಂತಾರಾಜ್ಯಕ್ಕೆ ಸೀಮಿತವಾಗಿವೆ. ತಾಲೂಕಿನಲ್ಲಿ ಕೇವಲ ಹೆಬ್ಬಣಿ, ಬ್ಯಾಡರಹಳ್ಳಿ, ಸಾತನೂರು ಗ್ರಾಮಗಳಲ್ಲಿ ಮೂರು ಬಸ್​ಗಳು ರಾತ್ರಿ ವೇಳೆ ತಂಗುತ್ತಿದ್ದು, ಪಕ್ಕದ ಕೆಜಿಎಫ್​ನಲ್ಲಿ ಒಂದು, ಆಂಧ್ರದ ಕುಪ್ಪಂನಲ್ಲಿ ಒಂದು ಬಸ್​ ರಾತ್ರಿ ಉಳಿದುಕೊಳ್ಳುತ್ತಿದ್ದು, ಉಳಿದ ಎಲ್ಲ ಬಸ್​ಗಳು ಮುಳಬಾಗಿಲು ಘಟಕ ಅಥವಾ ಹೊರ ರಾಜ್ಯ, ಹೊರ ಜಿಲ್ಲೆಗಳ ದೂರದ ಊರುಗಳಲ್ಲಿರುತ್ತವೆ. ಕೇಂದ್ರ ಸರ್ಕಾರ ನಮ್​ರ್ ಯೋಜನೆಯಲ್ಲಿ ಗ್ರಾಮೀಣ ಸಾರಿಗೆ ಸಂಸ್ಥೆಗೆ ಆರ್ಥಿಕ ನೆರವು ನೀಡುತ್ತಿದ್ದರೂ ಗ್ರಾಮೀಣ ಸಾರಿಗೆ ಸೇವೆ ಸಮರ್ಪಕವಾಗಿಲ್ಲ.

ಆಮೆಗತಿ ಕಾಮಗಾರಿ ಕಾರಣ

ನರಸಿಂಹ ತೀರ್ಥ ಬಳಿ ರಾಷ್ಟ್ರೀಯ ಹೆದ್ದಾರಿ&-75ರ ಕೆಳ ಸೇತುವೆ ಕಾಮಗಾರಿ ಆರಂಭಗೊಂಡು 2 ವರ್ಷವಾದರೂ ಪ್ರಗತಿ ಕಂಡಿಲ್ಲ. ನೆಪಮಾತ್ರಕ್ಕೆ ಕಾಮಗಾರಿ ನಡೆಯುತ್ತಿದ್ದು ಚಿತ್ತೂರು, ತಿರುಪತಿ ಚೆನ್ನೆ$ ಕಡೆಗಳಿಂದ ಬರುವ ಎಪಿಎಸ್​ಆರ್​ಸಿ, ಕೆಎಸ್​ಆರ್​ಟಿಸಿ ಸೇರಿ ಖಾಸಗಿ ಬಸ್​ಗಳು ಮುಳಬಾಗಿಲಿಗೆ ಬರದೆ ಬೈಪಾಸ್​ ಮೂಲಕ ಬೆಂಗಳೂರಿಗೆ ಸಂಚರಿಸುತ್ತಿವೆ. ಚಿತ್ತೂರು ಮಾರ್ಗವಾಗಿ ಬೆಂಗಳೂರಿಗೆ ಬರುವ ಬಸ್​ಗಳು ಮುಳಬಾಗಿಲು ಪ್ರವೇಶ ಮಾಡದಿರುವುದೇ ಬಸ್​ಗಳ ಕೊರತೆ ಉಂಟಾಗಲು ಪ್ರಮುಖ ಕಾರಣವಾಗಿದೆ.

ಮುಳಬಾಗಿಲಿಂದ ರಾತ್ರಿ 8 ಗಂಟೆ ಮೇಲೆ ಬೆಂಗಳೂರು ಮತ್ತು ಕೋಲಾರಕ್ಕೆ ಬಸ್​ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಅಧೀನ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು.

- ಶ್ರೀನಾಥ್​, ವಿಭಾಗಿಯ ನಿಯಂತ್ರಣ ಅಧಿಕಾರಿ, ಕೆಎಸ್​ಆರ್​ಟಿಸಿ, ಕೋಲಾರ ವಿಭಾಗ

ತಿರುಪತಿ ಚಿತ್ತೂರು ಕಡೆಗಳಿಂದ ಬೆಂಗಳೂರು ಕಡೆಗೆ ಬರುವ ಎಲ್ಲ ಸಾರಿಗೆ ಬಸುಗಳು ಮುಳಬಾಗಿಲಿಗೆ ಹೋಗಿ ಬರುವಂತೆ ಕಡ್ಡಾಯ ಸೂಚನೆ ನೀಡಿ ಸಮಸ್ಯೆ ಬಗೆಹರಿಸಲಾಗುವುದು.

- ಮಂಜುನಾಥ್​, ಡಿಟಿಒ, ಕೆಎಸ್​ಆರ್​ಟಿಸಿ, ಕೋಲಾರ ವಿಭಾಗ, ಕೋಲಾರ.

ಭಾನುವಾರ ರಾತ್ರಿ ಬೆಂಗಳೂರಿಗೆ ಪ್ರಯಾಣ ಮಾಡಲು ಬಸ್​ ವ್ಯವಸ್ಥೆಯೇ ಇರುವುದಿಲ್ಲ. ಜನ ಹೆಚ್ಚಾಗಿರುವುದು ನೋಡಿ ಟೂರಿಸ್ಟ್​ ಬಸ್ಸುಗಳು ಟಿಕೆಟ್​ ದರ ದುಪ್ಪಟ್ಟು ಪಡೆದು ಪ್ರಯಾಣಿಕರನ್ನು ತುಂಬಿಕೊಂಡು ಹೋಗುತ್ತಾರೆ. ಸೋಮವಾರ ಬೆಳಗ್ಗೆ ಶಾಲಾ&ಕಾಲೇಜುಗಳಿಗೆ ಹೋಗಲು ಬೆಂಗಳೂರಿಗೆ ರಾತ್ರಿಯೇ ಹೋಗಿ ತಂಗಲು ಸಾಧ್ಯವಾಗುತ್ತಿಲ್ಲ. ಬೆಳಗ್ಗೆಯೂ ಬಸ್​ ವ್ಯವಸ್ಥೆ ಅಷ್ಟಕ್ಕಷ್ಟೇ.

- ಜಿ.ಮಂಜುನಾಥ್​, ಗುಣಿಗಂಟಿಪಾಳ್ಯ, ಮುಳಬಾಗಿಲು ಪ್ರಯಾಣಿಕ

ಮುಳಬಾಗಿಲು ಘಟಕದ ಬಸ್​ ರಾತ್ರಿ 7.30ಕ್ಕೆ ಕೊನೆಗೊಂಡರೂ ಕೋಲಾರ ಘಟಕದ ಬಸ್​ಗಳು ಬಂದು ಹೋಗುತ್ತವೆ. ಕೋಲಾರ ವಿಭಾಗದ ಎಲ್ಲ ಘಟಕಗಳಿಂದ ತಿರುಪತಿಗೆ ಹೋಗಿ ಬರುವ ಬಸ್ಸುಗಳು ಮುಳಬಾಗಿಲಿಗೆ ಬಂದು ಹೋಗಲು ಅಧಿಕಾರಿಗಳು ಸೂಚನೆ ನೀಡಿದ್ದಾರೆ.

- ಅನ್ಸಸರ್​ ಪಾಷಾ, ಪ್ರಭಾರ ಘಟಕ ವ್ಯವಸ್ಥಾಪಕ, ಮುಳಬಾಗಿಲು

ಸೋಮವಾರ ಬೆಳಗ್ಗೆ ಸಾರಿಗೆ ಬಸ್​ಗಳು ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಇರುವುದಿಲ್ಲ. ನೂಕು ನುಗ್ಗಲುನಲ್ಲೇ ಮತ್ತು ನಿಂತುಕೊಂಡೆ ಪ್ರಯಾಣ ಮಾಡಬೇಕಾದ ಸ್ಥಿತಿ ಉಂಟಾಗಿದೆ. ಆದುದರಿಂದ ಹೆಚ್ಚಿನ ನೇರ ಬಸ್​ ವ್ಯವಸ್ಥೆ ಮಾಡಬೇಕು.

- ಕೆ.ವಿ.ಚಾಮೇಗೌಡ, ಕೊಲದೇವಿ, ಮುಳಬಾಗಿಲು ತಾಲೂಕು

ರಾತ್ರಿ ಮುಳಬಾಗಿಲಿಂದ ಬೆಂಗಳೂರಿಗೆ ಕೆಎಸ್​ಆರ್​ಟಿಸಿ ಬಸ್​ಗಳು ಇಲ್ಲದಿರುವ ಬಗ್ಗೆ ಗಮನಕ್ಕೆ ತಂದಿದ್ದು, ಈ ಬಗ್ಗೆ ತಕ್ಷಣ ಕ್ರಮ ಕೈಗೊಂಡು ತಿರುಪತಿಯಿಂದ ಬರೋ ಬಸ್​ಗಳು ಸೇರಿ ಸ್ಥಳಿಯವಾಗಿ ಬಸ್​ಗಳನ್ನು ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ನೇರ ಬಸ್​ ವ್ಯವಸ್ಥೆ ಮಾಡಲಾಗುವುದು.

- ಸಮೃದ್ಧಿ ವಿ.ಮಂಜುನಾಥ್​, ಶಾಸಕ ಮುಳಬಾಗಿಲು ಕ್ಷೇತ್ರ