ಕೆ.ಆರ್.ಸಾಗರ: ಅತಿಯಾಗಿ ಮದ್ಯ ಸೇವನೆ ಮಾಡಿದ ದಂಪತಿ ಬಾಳಲ್ಲಿ ದುರಂತ ಸಂಭವಿಸಿದೆ. ಪತಿ ಮೃತಪಟ್ಟಿದ್ದರೆ, ಪತ್ನಿ ತೀವ್ರ ಅಸ್ಪಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೈಸೂರಿನ ಖಾಸಗಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಮೊಗರಹಳ್ಳಿ ಗ್ರಾಮದ ಗುರು(35) ಮೃತ. ಇವರ ಪತ್ನಿ ಕಲ್ಪನಾ (29) ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗುರು ಮತ್ತು ಕಲ್ಪನಾ ಪ್ರತಿದಿನ ಮದ್ಯ ಸೇವನೆ ಮಾಡುತ್ತಿದ್ದರು. ಇದರಿಂದ ಇಬ್ಬರ ಆರೋಗ್ಯವೂ ಕೆಟ್ಟಿತ್ತು. ಡಿ.21ರ ರಾತ್ರಿಯೂ ಅತಿಯಾಗಿ ಮದ್ಯ ಸೇವಿಸಿದ್ದರು. ಮರುದಿನ ಬೆಳಗ್ಗೆ ಗುರು ತನ್ನ ಸ್ನೇಹಿತರಿಗೆ ಕರೆ ಮಾಡಿ ಅನಾರೋಗ್ಯದ ವಿಷಯ ತಿಳಿಸಿದರು. ಸ್ನೇಹಿತರು ಮತ್ತು ನೆರೆಯವರು ದಂಪತಿಯನ್ನು ಆಸ್ಪತ್ರೆಗೆ ಸಾಗಿಸಿದ್ದರಾದರೂ ಮಾರ್ಗಮಧ್ಯೆ ಗುರು ಮೃತಪಟ್ಟಿದ್ದಾರೆ. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಕಲ್ಪನಾ ಅವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಕೆ.ಆರ್.ಸಾಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.