ಜಿಲ್ಲೆ

ಕಠಿಣ ನಿರ್ಧಾರ ಅನಿವಾರ್ಯ

Hassan

ಹಾಸನ: ಕರೊನಾ ಸೋಂಕು ನಿಯಂತ್ರಣಕ್ಕಾಗಿ ಕೆಲ ಕಠಿಣ ನಿರ್ಧಾರ ಕೈಗೊಳ್ಳುವುದು ಅನಿವಾರ್ಯವಾಗಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಹೇಳಿದರು.

ರಾಜ್ಯವನ್ನು ಲಾಕ್‌ಡೌನ್ ಮಾಡಿ ಸರ್ಕಾರ ಆದೇಶಿಸಿದ್ದು ಜಿಲ್ಲೆಯಲ್ಲೂ ಮಾ.31ರವರೆಗೆ 144ನೇ ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಬ್ಯಾಂಕ್, ಎಟಿಎಂ, ದಿನಸಿ ಅಂಗಡಿ, ಆಸ್ಪತ್ರೆ, ಔಷಧ ಮಳಿಗೆ, ಪೆಟ್ರೋಲ್ ಬಂಕ್ ಸೇರಿದಂತೆ ಅಗತ್ಯ ವಸ್ತುಗಳ ಹೊರತುಪಡಿಸಿ ಎಲ್ಲವನ್ನೂ ಬಂದ್ ಮಾಡಲಾಗಿದೆ. ಸೂಚನೆ ಮೀರಿ ವರ್ತಿಸಿದರೆ ಅಂತಹವರ ವಿರುದ್ಧ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಎಚ್ಚರಿಕೆ ನೀಡಿದರು.

ವಿದೇಶಿಗರ ಮನೆಗೆ ಪೋಸ್ಟರ್: ವಿದೇಶದಿಂದ ಜಿಲ್ಲೆಗೆ ಬಂದಿರುವ ವ್ಯಕ್ತಿಗಳ ಮನೆಗೆ ‘ನಾವೀಗ ಗೃಹ ಕ್ವಾರಂಟೈನ್‌ನಲ್ಲಿ ಇದ್ದೇವೆ. ಮನೆಗೆ ಭೇಟಿ ನೀಡದಿರಿ’ ಎಂಬ ಪೋಸ್ಟರ್ ಅಂಟಿಸಿದ್ದು ಆ ಮನೆಗಳಿಗೆ ಸಾರ್ವಜನಿಕರು ಹೋಗಬಾರದು. ಏ. 1ರ ನಂತರ ಪೋಸ್ಟರ್‌ಗಳನ್ನು ನಾವೇ ತೆಗೆದು ಹಾಕುತ್ತೇವೆ. ಹೋಮ್ ಕ್ವಾರಂಟೈನ್‌ನಲ್ಲಿರುವ ವ್ಯಕ್ತಿಯ ಕೈಗೆ ಮುದ್ರೆ ಹಾಕಲಾಗಿದ್ದು ಅಂತಹವರು ಯಾರಾದರೂ ಮನೆಯಿಂದ ಹೊರಗೆ ಕಾಣಿಸಿಕೊಂಡರೆ ಆಸ್ಪತ್ರೆಗೆ ದಾಖಲಿಸಬೇಕಾಗುತ್ತದೆ. ಆಸ್ಪತ್ರೆಯಲ್ಲಿ ಸ್ಥಳಾವಕಾಶ ಸಾಧ್ಯವಾಗದಿದ್ದರೆ ಕಾಲೇಜು ಹಾಸ್ಟೆಲ್‌ಗಳಲ್ಲಿ ಅದಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇದೊಂದು ಸಾಮುದಾಯಿಕ ಸಮಸ್ಯೆಯಾಗಿರುವುದರಿಂದ ಎಲ್ಲರ ಸಹಕಾರ ಮುಖ್ಯ ಎಂದು ಹೇಳಿದರು.

37 ಜನರ ಮೇಲೆ 14 ದಿನ ನಿಗಾ: ಇಲ್ಲಿವರೆಗೆ ವಿದೇಶದಿಂದ ಬಂದ 207 ಜನರನ್ನು ತಪಾಸಣೆಗೆ ಒಳಪಡಿಸಲಾಗಿದೆ. 37 ಜನರು ಹೋಂ ಐಸೋಲೇಷನ್‌ನಲ್ಲಿ ಇದ್ದು ಅವರ ಮೇಲೆ 14 ದಿನ ನಿಗಾ ವಹಿಸಲಾಗಿದೆ. 160 ಜನರು ಸಾಮಾನ್ಯ ತಪಾಸಣೆಗೆ ಒಳಪಟ್ಟಿದ್ದು ಅಂತವರಿಗೂ ಹೊರಗಡೆ ತಿರುಗಾಡದಂತೆ ಸಲಹೆ ನೀಡಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ 75 ಹಾಸಿಗೆಯ ಪ್ರತ್ಯೇಕ ವಾರ್ಡ್ ತೆರೆಯಲಾಗಿದೆ. ಇದುವರೆಗೆ ಒಂದೂ ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ. ಜಿಲ್ಲೆಯಲ್ಲಿ ಚಿಕಿತ್ಸೆಗೆ ಸಂಬಂಧಿಸಿದಂತೆ ಯಾವುದೇ ಕೊರತೆಯಿಲ್ಲ. 10 ಸಾವಿರ ಮಾಸ್ಕ್‌ಗಳು ಬಂದಿದ್ದು ಅವಶ್ಯಕತೆ ಇದ್ದಲ್ಲಿಗೆ ಕಳುಹಿಸಿಕೊಡಲಾಗುವುದು. ಬೆಂಗಳೂರಿನಿಂದ ಹೆಚ್ಚುವರಿ 50 ಸಾವಿರ ಮಾಸ್ಕ್ ತರಿಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಪೂಜೆ, ಪ್ರಾರ್ಥನೆ ಬಂದ್: ಯುಗಾದಿ ಹಿನ್ನೆಲೆಯಲ್ಲಿ ದೇವಾಲಯಗಳಲ್ಲಿ ಪೂಜೆಗಾಗಿ ಜನ ಸೇರುವ ಸಾಧ್ಯತೆಯಿರುವುದರಿಂದ ಪ್ರಮುಖ ದೇವಾಲಯಗಳ ಬಾಗಿಲು ತೆರೆಯದಂತೆ ಸೂಚಿಸಲಾಗಿದೆ. ಚರ್ಚ್ ಹಾಗೂ ಮಸೀದಿಗಳಲ್ಲಿ ಏ. 1ರ ವರೆಗೆ ಸಾರ್ವಜನಿಕ ಪ್ರಾರ್ಥನೆ ನಿಷೇಧಿಸಲಾಗಿದೆ. ಒಂದು ವೇಳೆ ಜಿಲ್ಲಾಡಳಿತದ ಸೂಚನೆ ಧಿಕ್ಕರಿಸಿ ಅನಗತ್ಯವಾಗಿ ಓಡಾಡುವುದು, ನಾಲ್ಕೈದು ಜನರು ಒಟ್ಟಾಗಿ ನಿಂತು ಮಾತಾಡುವುದು, ಸಭೆ ಸಮಾರಂಭ ನಡೆಸುವುದು ಕಂಡುಬಂದರೆ ಅಂತಹವರ ವಿರುದ್ಧ ಸೆಕ್ಷನ್ 270ರ ಅಡಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಮಧ್ಯಾಹ್ನದಿಂದ ಹೂ ವ್ಯಾಪಾರ ಬಂದ್: ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಜನರ ಓಡಾಟ ಹೆಚ್ಚಾಗಿದೆ. ಆದ್ದರಿಂದ ಬುಧವಾರ ಮಧ್ಯಾಹ್ನ 2ರ ಬಳಿಕ ಹೂವು ಹಾಗೂ ಇತರ ವ್ಯಾಪಾರ ಬಂದ್ ಮಾಡಲಾಗುವುದು. ನಗರದ ಎಪಿಎಂಸಿಯಲ್ಲಿ ಮಂಗಳವಾರ ಬೆಳಗ್ಗೆ ಸಾವಿರಾರು ಜನರು ಸೇರಿರುವ ಸುದ್ದಿ ತಿಳಿದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತೆರವುಗೊಳಿಸಿದ್ದಾರೆ. ನಿತ್ಯ ಜೀವನದ ಅಗತ್ಯ ಸಾಮಗ್ರಿ ಖರೀದಿಗೆ ಯಾವುದೇ ತೊಂದರೆಯಾಗುವುದಿಲ್ಲ. ದಿನಸಿ, ತರಕಾರಿ ಅಂಗಡಿಗೆ ಹೋಗುವ ಜನರು ಒಂದು ಮೀಟರ್ ಅಂತರದಲ್ಲಿ ಸರದಿ ಸಾಲಿನಲ್ಲಿ ನಿಲ್ಲಬೇಕು. ಈ ಕುರಿತು ಅಂಗಡಿ ಮಾಲೀಕರು ಗ್ರಾಹಕರಿಗೆ ಅರಿವು ಮೂಡಿಸಬೇಕು. ಇಲ್ಲವಾದರೆ ತಪ್ಪಿತಸ್ಥ ಅಂಗಡಿಗಳನ್ನು ಮುಚ್ಚಬೇಕಾಗುತ್ತದೆ. ಕೈಗಾರಿಕಾ ಪ್ರದೇಶದ 6 ಗಾರ್ಮೆಂಟ್ಸ್‌ಗಳು ಮಂಗಳವಾರ ಹಾಗೂ ಬುಧವಾರ 2 ಫ್ಯಾಕ್ಟರಿಗಳು ಬಂದ್ ಆಗಿವೆ. ಹೋಟೆಲ್‌ಗಳಲ್ಲಿ ಪಾರ್ಸೆಲ್ ವ್ಯವಸ್ಥೆಗೆ ಸೂಚಿಸಲಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎ.ಪರಮೇಶ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಪರಿಸ್ಥಿತಿ ನಿಯಂತ್ರಿಸುವಂತೆ ಜಿಪಂ ಅಧ್ಯಕ್ಷರಿಗೆ ಸೂಚಿಸಲಾಗಿದೆ. ವಿದೇಶದಿಂದ ಯಾರಾದರೂ ಬಂದರೆ ಅವರ ಮಾಹಿತಿ ನೀಡುವಂತೆ ಸೂಚಿಸಲಾಗಿದೆ ಎಂದರು.

ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಉಪವಿಭಾಗಾಧಿಕಾರಿ ಡಾ.ನವೀನ್ ಭಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ.ಸತೀಶ್‌ಕುಮಾರ್ ಇದ್ದರು.