ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಸೌಂದರ್ಯಕ್ಕೆ ಕಪ್ಪುಚುಕ್ಕೆಯಂತಿದ್ದ ಹೊರ ವರ್ತುಲ ರಸ್ತೆಯ ತ್ಯಾಜ್ಯ ಸಮಸ್ಯೆಗೆ ಕಡೆಗೂ ಮುಕ್ತಿ ದೊರೆತ್ತಿದೆ. ಮೈಸೂರು ನಗರ ಪಾಲಿಕೆಯು ‘ಸ್ವಚ್ಛತೆಯೇ ಸೇವೆ’ ಅಭಿಯಾನದಡಿ ಹೊರ ವರ್ತುಲ ರಸ್ತೆಯನ್ನು ಸಂಪೂರ್ಣ ಸ್ವಚ್ಛಗೊಳಿಸಿದೆ.
ನಗರ ಪಾಲಿಕೆಯ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ಆಯೋಜಿಸಿದ ಈ ಬೃಹತ್ ಸ್ವಚ್ಛತಾ ಕಾರ್ಯಾಚರಣೆಯಲ್ಲಿ ವರ್ತುಲ ರಸ್ತೆಯ ತ್ಯಾಜ್ಯ, ಕಟ್ಟಡ ತ್ಯಾಜ್ಯವನ್ನು ತೆರವುಗೊಳಿಸಲಾಗಿದ್ದು, ಗುರುವಾರ ಬಹುತೇಕ ಸ್ವಚ್ಛತಾ ಕಾರ್ಯ ಮುಕ್ತಾಯಗೊಂಡಿದ್ದು, ಉಳಿಕೆಯಾದರೆ ಅ.2 ರಂದು ಮುಕ್ತಾಯಗೊಳಿಸಲಾಗುವುದು.
ಹಲವು ವರ್ಷಗಳಿಂದ ಕಸದ ಸಮಸ್ಯೆ:
ಮೈಸೂರು ನಗರದ ಹೊರ ವರ್ತುಲ ರಸ್ತೆಯು ನಗರದ ಪ್ರಮುಖ ಸಂಪರ್ಕ ರಸ್ತೆಯಾಗಿದ್ದು, ಪ್ರತಿನಿತ್ಯ ಸಾವಿರಾರು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ಆದರೆ, ರಸ್ತೆ ಬದಿಗಳಲ್ಲಿ ಎಲ್ಲೆಂದರಲ್ಲಿ ಕಸ ಹಾಗೂ ಕಟ್ಟಡ ತ್ಯಾಜ್ಯ ಸುರಿಯುತ್ತಿರುವುದರಿಂದ ವರ್ತುಲ ರಸ್ತೆಯ ಹಲವು ಭಾಗಗಳು ತ್ಯಾಜ್ಯ ವಿಲೇವಾರಿ ತಾಣಗಳಾಗಿ ಮಾರ್ಪಟ್ಟಿದ್ದವು. ಇದರಿಂದ ರಸ್ತೆಯ ಸೌಂದರ್ಯ ಹಾಳಾಗುವುದರ ಜತೆಗೆ ಪರಿಸರ ಮಾಲಿನ್ಯ ಮತ್ತು ದುರ್ವಾಸನೆಯ ಸಮಸ್ಯೆಯೂ ಉಂಟಾಗಿತ್ತು.
ನಗರದ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿ ಮತ್ತು ಸುಂದರವಾಗಿ ಕಾಪಾಡಿಕೊಳ್ಳಬೇಕೆಂಬ ಉದ್ದೇಶದ ನಡುವೆಯೂ ವರ್ತುಲ ರಸ್ತೆಯಲ್ಲಿ ತ್ಯಾಜ್ಯ ಸುರಿಯುವ ಪ್ರವೃತ್ತಿಗೆ ಕಡಿವಾಣ ಹಾಕಲು ಸಾಧ್ಯವಾಗಿರಲಿಲ್ಲ. ಇದೀಗ ನಗರ ಪಾಲಿಕೆ ಕೈಗೊಂಡಿರುವ ಸ್ವಚ್ಛತಾ ಕಾರ್ಯಾಚರಣೆಯಿಂದ ರಸ್ತೆ ಬದಿಗಳಲ್ಲಿ ಸಂಗ್ರಹವಾಗಿದ್ದ ತ್ಯಾಜ್ಯ ತೆರವುಗೊಳ್ಳುತ್ತಿದ್ದು, ವರ್ತುಲ ರಸ್ತೆಯ ಪರಿಸರ ಸುಧಾರಿಸುವ ನಿರೀಕ್ಷೆ ಮೂಡಿದೆ.
ಜವಾಬ್ದಾರಿ ಹಂಚಿಕೆಯಾದರೂ ಸ್ವಚ್ಛತೆ ಮರೀಚಿಕೆ:
2024ರಲ್ಲಿ ಅಂದಿನ ಸಂಸದ ಪ್ರತಾಪ್ ಸಿಂಹ ಅವರು ನಗರ ಪಾಲಿಕೆಯ ಜಯಚಾಮರಾಜೇಂದ್ರ ಒಡೆಯರ್ ಸಭಾಂಗಣದಲ್ಲಿ ಸಭೆ ನಡೆಸಿ, ಹೊರ ವರ್ತುಲ ರಸ್ತೆಯ ಸ್ವಚ್ಛತೆ ನಿರ್ವಹಣೆಗಾಗಿ ವಿವಿಧ ಸ್ಥಳೀಯ ಸಂಸ್ಥೆಗಳಿಗೆ ಜವಾಬ್ದಾರಿ ಹಂಚಿಕೆ ಮಾಡಿದ್ದರು. ಜೆ.ಪಿ.ನಗರ ರೈಲ್ವೆ ಅಂಡರ್‌ಪಾಸ್‌ನಿಂದ ತಿ.ನರಸೀಪುರ ಜಂಕ್ಷನ್‌ವರೆಗಿನ ಸ್ವಚ್ಛತಾ ಜವಾಬ್ದಾರಿಯನ್ನು ಕಡಕೊಳ ಪಟ್ಟಣ ಪಂಚಾಯಿತಿಗೆ ವಹಿಸಲಾಗಿತ್ತು. ಅದೇ ರೀತಿ ತಿ.ನರಸೀಪುರ ಜಂಕ್ಷನ್‌ನಿಂದ ಮಣಿಪಾಲ್ ಆಸ್ಪತ್ರೆ ಜಂಕ್ಷನ್‌ವರೆಗೆ (ಬೆಂಗಳೂರು ರಸ್ತೆ) ಮೈಸೂರು ನಗರ ಪಾಲಿಕೆಗೆ ಜವಾಬ್ದಾರಿ ನೀಡಲಾಗಿತ್ತು.
ಮಣಿಪಾಲ್ ಆಸ್ಪತ್ರೆ ಜಂಕ್ಷನ್‌ನಿಂದ ಕೆ.ಆರ್.ಎಸ್. ರಸ್ತೆ ಜಂಕ್ಷನ್‌ವರೆಗಿನ ಭಾಗದ ಸ್ವಚ್ಛತಾ ಜವಾಬ್ದಾರಿಯನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ತಾಲೂಕು ಪಂಚಾಯಿತಿ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿಗಳಿಗೆ ಹಂಚಿಕೆ ಮಾಡಲಾಗಿತ್ತು. ಕೆ.ಆರ್.ಎಸ್. ರಸ್ತೆ ಜಂಕ್ಷನ್‌ನಿಂದ ವಿಜಯನಗರ ನಾಲ್ಕನೇ ಹಂತದ ಕನ್ನಡ ವೃತ್ತದವರೆಗೆ ಹೂಟಗಳ್ಳಿ ನಗರಸಭೆಗೆ, ಕನ್ನಡ ವೃತ್ತದಿಂದ ಆದಿತ್ಯ ವೃತ್ತದವರೆಗೆ ಬೋಗಾದಿ ಪಟ್ಟಣ ಪಂಚಾಯಿತಿಗೆ ಹಾಗೂ ಆದಿತ್ಯ ವೃತ್ತದಿಂದ ಜೆ.ಪಿ.ನಗರ ರೈಲ್ವೆ ಅಂಡರ್‌ಪಾಸ್‌ವರೆಗಿನ ಭಾಗದ ಸ್ವಚ್ಛತಾ ಜವಾಬ್ದಾರಿಯನ್ನು ಶ್ರೀರಾಂಪುರ ಪಟ್ಟಣ ಪಂಚಾಯಿತಿಗೆ ವಹಿಸಲಾಗಿತ್ತು. ಆದರೆ, ಈ ರೀತಿಯಾಗಿ ಜವಾಬ್ದಾರಿಗಳನ್ನು ಹಂಚಿಕೆ ಮಾಡಿದರೂ ವರ್ತುಲ ರಸ್ತೆಯ ತ್ಯಾಜ್ಯ ಸಮಸ್ಯೆಗೆ ನಿರೀಕ್ಷಿತ ಪರಿಹಾರ ದೊರಕಿರಲಿಲ್ಲ. ರಸ್ತೆ ಬದಿಗಳಲ್ಲಿ ಕಸ ಸುರಿಯುವುದು ಮುಂದುವರಿದಿದ್ದರಿಂದ ಹಲವು ಪ್ರದೇಶಗಳು ತ್ಯಾಜ್ಯದ ತಾಣಗಳಾಗಿಯೇ ಉಳಿದಿದ್ದವು. ಇದೀಗ ಮೈಸೂರು ನಗರ ಪಾಲಿಕೆ ಸ್ವತಃ ಸ್ವಚ್ಛತಾ ಕಾರ್ಯಾಚರಣೆಗೆ ಮುಂದಾಗಿರುವುದು ಗಮನಾರ್ಹವಾಗಿದೆ.
ಬೃಹತ್ ಯಂತ್ರೋಪಕರಣಗಳ ಬಳಕೆ:
ಹೊರ ವರ್ತುಲ ರಸ್ತೆಯನ್ನು ಸಂಪೂರ್ಣ ಸ್ವಚ್ಛಗೊಳಿಸುವ ಉದ್ದೇಶದಿಂದ ನಗರ ಪಾಲಿಕೆಯು ಬೃಹತ್ ಪ್ರಮಾಣದಲ್ಲಿ ಯಂತ್ರೋಪಕರಣಗಳನ್ನು ಕಾರ್ಯಾಚರಣೆಗೆ ನಿಯೋಜಿಸಿದೆ. ಒಟ್ಟು 20 ಜೆಸಿಬಿಗಳು, 25 ಟಿಪ್ಪರ್‌ಗಳು ಹಾಗೂ 17 ಡೋಜರ್‌ಗಳನ್ನು ಬಳಸಿಕೊಂಡು ರಸ್ತೆ ಬದಿಗಳಲ್ಲಿ ಸಂಗ್ರಹವಾಗಿರುವ ತ್ಯಾಜ್ಯವನ್ನು ತೆರವುಗೊಳಿಸಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಸುತ್ತಮುತ್ತಲಿನ ನಗರ ಸ್ಥಳೀಯ ಸಂಸ್ಥೆಗಳ ಸಮನ್ವಯದೊಂದಿಗೆ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ರಸ್ತೆಯ ಅಕ್ಕಪಕ್ಕದಲ್ಲಿ ದೀರ್ಘಕಾಲದಿಂದ ಸಂಗ್ರಹವಾಗಿದ್ದ ಕಸ ಮತ್ತು ಕಟ್ಟಡ ತ್ಯಾಜ್ಯವನ್ನು ತೆರವುಗೊಳಿಸಿ, ಸಂಚಾರಿಕರಿಗೆ ಹಾಗೂ ಸ್ಥಳೀಯ ನಿವಾಸಿಗಳಿಗೆ ಸ್ವಚ್ಛ ಪರಿಸರ ಕಲ್ಪಿಸುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ.
ಕಟ್ಟಡ ತ್ಯಾಜ್ಯದ್ದೇ ಸಮಸ್ಯೆ:
ವರ್ತುಲ ರಸ್ತೆಯ ಸ್ವಚ್ಛತಾ ಕಾರ್ಯಾಚರಣೆಯಲ್ಲಿ ಸಾಮಾನ್ಯ ಕಸದ ಜತೆಗೆ ಕಟ್ಟಡ ತ್ಯಾಜ್ಯವನ್ನು ತೆರವುಗೊಳಿಸುವುದೂ ಪ್ರಮುಖ ಸವಾಲಾಗಿದೆ. ನಗರದ ವಿವಿಧೆಡೆ ಕಟ್ಟಡ ನಿರ್ಮಾಣ ಹಾಗೂ ಕಟ್ಟಡಗಳ ತೆರವು ಕಾರ್ಯಗಳಿಂದ ಉತ್ಪತ್ತಿಯಾಗುವ ತ್ಯಾಜ್ಯವನ್ನು ಕೆಲವರು ರಸ್ತೆ ಬದಿಗಳಲ್ಲಿ ತಂದು ಸುರಿಯುತ್ತಿದ್ದಾರೆ. ಇದರಿಂದ ವರ್ತುಲ ರಸ್ತೆಯ ಹಲವು ಭಾಗಗಳಲ್ಲಿ ಕಟ್ಟಡ ತ್ಯಾಜ್ಯದ ದೊಡ್ಡ ರಾಶಿಗಳೇ ನಿರ್ಮಾಣವಾಗಿವೆ. ಪ್ರಸ್ತುತ ಕಾರ್ಯಾಚರಣೆಯಲ್ಲಿ ರಸ್ತೆ ಬದಿಗಳಲ್ಲಿ ಸಂಗ್ರಹವಾಗಿರುವ ಕಟ್ಟಡ ತ್ಯಾಜ್ಯವನ್ನು ತೆರವುಗೊಳಿಸಲಾಗುತ್ತಿದೆ. ರಸ್ತೆ ಪಕ್ಕದಲ್ಲಿ ದೊಡ್ಡ ಹಳ್ಳಗಳಿರುವ ಕಡೆಗಳಲ್ಲಿ ನಿಯಮಾನುಸಾರ ಅವುಗಳನ್ನು ಭರ್ತಿ ಮಾಡಲು ಕಟ್ಟಡ ತ್ಯಾಜ್ಯವನ್ನು ಬಳಸಲಾಗುತ್ತಿದ್ದು, ಹಳ್ಳಗಳಿಲ್ಲದ ಪ್ರದೇಶಗಳಲ್ಲಿ ಸಂಗ್ರಹವಾಗಿರುವ ತ್ಯಾಜ್ಯವನ್ನು ಬೇರೆಡೆಗೆ ಸ್ಥಳಾಂತರಿಸಲಾಗುತ್ತಿದೆ.
ನಗರ ಪಾಲಿಕೆ ಕೈಗೊಂಡಿರುವ ಈ ಕಾರ್ಯಾಚರಣೆಯಿಂದ ವರ್ತುಲ ರಸ್ತೆಯ ಸೌಂದರ್ಯ ಹೆಚ್ಚುವುದರ ಜತೆಗೆ ಪರಿಸರ ಮಾಲಿನ್ಯ ಮತ್ತು ದುರ್ವಾಸನೆಯ ಸಮಸ್ಯೆ ಕಡಿಮೆಯಾಗಲಿದೆ. ಆದರೆ, ಸ್ವಚ್ಛತಾ ಕಾರ್ಯಾಚರಣೆ ನಡೆಸುವುದಷ್ಟೇ ಸಮಸ್ಯೆಗೆ ಶಾಶ್ವತ ಪರಿಹಾರವಾ ಗುವುದಿಲ್ಲ. ಸಾರ್ವಜನಿಕರು ಹಾಗೂ ಕಟ್ಟಡ ನಿರ್ಮಾಣ ಕಾಮಗಾರಿ ನಡೆಸುವವರು ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ನಡೆದುಕೊಂಡರೆ ವರ್ತುಲ ರಸ್ತೆಯನ್ನು ಸದಾ ಕಾಲ ಶುಚಿಯಾಗಿ ಇಡಬಹುದು. ಇದಕ್ಕೆ ಎಲ್ಲರ ಸಹಕಾರ ಅಗತ್ಯ.
ಎಂ.ಕೆ. ಸವಿತಾ, ನಗರ ಪಾಲಿಕೆ ಆಯುಕ್ತರು