ವಿರಾಜಪೇಟೆ: ಎವೆಂಜರ್ಸ್ ಬಾಸ್ಕೆಟ್ ಬಾಲ್ ಕ್ಲಬ್ ಸಹಯೋಗದಲ್ಲಿ ನಗರದ ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ ಬಾಸ್ಕೆಟ್ ಬಾಲ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಹೊನಲು ಬೆಳಕಿನ ಕೊಡಗು ಬಾಸ್ಕೆಟ್ ಬಾಲ್ ಲೀಗ್‌ನ 2ನೇ ಆವೃತ್ತಿಯಲ್ಲಿ ಮಡಿಕೇರಿ, ಗೊಣಿಕೊಪ್ಪ, ಪೊನ್ನಂಪೇಟೆ, ವಿರಾಜಪೇಟೆ ಸೇರಿದಂತೆ ವಿವಿಧ ಸ್ಥಳಗಳಿಂದ ಒಟ್ಟು 6 ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದವು. 60 ಕ್ರೀಡಾಪಟುಗಳು ಪಾಲ್ಗೊಂಡಿದ್ದರು.
ಕರ್ನಾಟಕ ರಾಜ್ಯ ಬಾಸ್ಕೆಟ್ ಬಾಲ್ ಅಸೋಸಿಯೇಷನ್‌ನ ನುರಿತ ತೀರ್ಪುಗಾರರು ಪಂದ್ಯಾಟದಲ್ಲಿ ಪಾಲ್ಗೊಂಡಿದ್ದರು. ಒಟ್ಟು 8 ಪಂದ್ಯಾಟಗಳು ನಡೆದವು. ಒಂದು ಪಂದ್ಯಕ್ಕೆ 40 ನಿಮಿಷ ಸಮಯ ನಿಗದಿಗೋಳಿಸಲಾಗಿತ್ತು. ಅಂತಿಮ ಸುತ್ತಿಗೆ ನಾಲ್ಕು ತಂಡಗಳು ಪ್ರವೇಶ ಪಡೆಯಿತು. ಪ್ರಥಮ ಸೆಮಿ ಫೈನಲ್ ಪಂದ್ಯಾಟ ವಿರಾಜಪೇಟೆಯ ಬ್ಲಾಕ್ ಕೋಬ್ರಾಸ್ ತಂಡ ಮತ್ತು ಗೊಣಿಕೊಪ್ಪದ ಡಿ.ಕೋಚ್ ತಂಡಗಳ ನಡುವೆ ನಡೆಯಿತು. ಪಂದ್ಯಾಟದಲ್ಲಿ 37- 54 ಅಂಕಗಳೊಂದಿಗೆ ಡಿ.ಕೋಚ್ ತಂಡ ಫೈನಲ್ ಪ್ರವೇಶ ಪಡೆಯಿತು.
ದ್ವಿತೀಯ ಸೆಮಿಫೈನಲ್ ಪೊನ್ನಂಪೇಟೆಯ ಟೀಗಲ್ ಹೂಫ್ ಸ್ಟಾರ್ ಮತ್ತು ಮಡಿಕೇರಿಯ ಮಾರ್ಷಲ್ಸ್ ತಂಡದ ನಡುವೆ ನಡೆಯಿತು. ರೋಚಕ ಪಂದ್ಯಾಟದಲ್ಲಿ 43-45 ಅಂಕಗಳಿಸಿ ಎರಡು ಅಂಕಗಳೊಂದಿಗೆ ಹೂಫ್ ಸ್ಟಾರ್ ತಂಡ ಫೈನಲ್ಸ್ಗೆ ಲಗ್ಗೆಯಿಟ್ಟಿತು. ಆದರೆ ವರುಣನ ಅವಕೃಪೆಯಿಂದಾಗಿ ಮಧ್ಯಾಹ್ನದ ಬಳಿಕ ನಡೆಯಬೇಕಿದ್ದ ಎಲ್ಲ ಪಂದ್ಯಗಳು ಮಳೆಯಲ್ಲಿ ನಡೆಯಿತು. ಫೈನಲ್ ಪ್ರವೇಶ ಮಾಡಿದ ಎರಡೂ ತಂಡಗಳ ಮಾಲೀಕರು ಮತ್ತು ನಾಯಕರು ಹಾಗೂ ಆಟಗಾರರ ನಿರ್ಣಯದಂತೆ ಪಂದ್ಯ ರದ್ದುಗೊಳಿಸಲಾಯಿತು. ಬಳಿಕ ಆಯೋಜಕರು ಉಭಯ ತಂಡಗಳನ್ನು ವಿಜೇತರು ಎಂದು ಘೋಷಣೆ ಮಾಡಿದರು. ವಿಜೇತ ತಂಡಗಳಿಗೆ ಆಕರ್ಷಕ ಟ್ರೋಫಿ ನೀಡಲಾಯಿತು. ನಗದು ಪುರಸ್ಕಾರವನ್ನು ಸಮಪಾಲು ಮಾಡಲಾಯಿತು.
ಉತ್ತಮ ಗುರಿಕಾರ ಪ್ರಶಸ್ತಿಯನ್ನು ಅರ್ಪಣ್, ಉತ್ತಮ ರಕ್ಷಣಾತ್ಮಕ ಆಟಗಾರ ಪ್ರಶಸ್ತಿ ಹೇಮು ಮುದ್ದಯ್ಯ, ಉತ್ತಮ ಕಲಾತ್ಮಕ ಆಟಗಾರ ಪ್ರಶಸ್ತಿಯನ್ನು ಸೋನಂ, ಮತ್ತು ಅಮೂಲ್ಯ ಆಟಗಾರರಾಗಿ ಪರದಂಡ ಬೋಪಣ್ಣ ವೈಯಕ್ತಿಕ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಪಂದ್ಯಾಟದ ಅಯೋಜಕರಾದ ಎವೆಂಜರ್ಸ್ ಬಾಸ್ಕೆಟ್ ಬಾಲ್ ಕ್ಲಬ್ನ ಇರ್ಷಾದ್ (ಇಚ್ಚು) ನೌಶೀಬ್ ಮತ್ತು ಸದಸ್ಯರು, ವಿವಿಧ ತಂಡಗಳ ಮಾಲೀಕರು, ಪಂದ್ಯಾಟದ ಪ್ರಮುಖ ಪ್ರಯೋಜಕರಾದ ಡಿ.ಕೋಚ್ ಸಂಸ್ಥೆಯ ಮಾಲೀಕರು, ಆಟಗಾರರು ಹಾಜರಿದ್ದರು.