ಬೆಂಗಳೂರು: ಟೋಲ್ ಶುಲ್ಕ ಪಾವತಿಗೆ ಫಾಸ್ಟ್ಯಾಗ್ ವ್ಯವಸ್ಥೆ ಜಾರಿ ನಂತರ ಇದೇ ಮೊದಲ ಬಾರಿಗೆ ಮಾಸಿಕ ಟೋಲ್ ಶುಲ್ಕ ವಸೂಲಿ 2 ಸಾವಿರ ಕೋಟಿ ರೂ. ದಾಟಿದೆ. ಟೋಲ್ ಪ್ಲಾಜಾಗಳಲ್ಲಿ ಶುಲ್ಕ ಪಾವತಿಗೆ ಕಾಯುವ ಪರಿಪಾಠ ತಪ್ಪಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಳೆದ ಜನವರಿ 15ರಿಂದ ಫಾಸ್ಟ್ಯಾಗ್ ವ್ಯವಸ್ಥೆ ಜಾರಿಗೊಳಿಸಿದೆ. ಫಾಸ್ಟ್ಯಾಗ್ ಮೂಲಕವೇ ಟೋಲ್ ಶುಲ್ಕ ಪಾವತಿಸುವುದು ಕಡ್ಡಾಯವಾಗಿಸಲಾದ ಕಾರಣ ಈಗಾಗಲೆ ಶೇ. 80 ವಾಹನಗಳು ಫಾಸ್ಟ್ಯಾಗ್ ವ್ಯವಸ್ಥೆ ಅಳವಡಿಸಿಕೊಂಡಿವೆ. ಇದರಿಂದಾಗಿ ಟೋಲ್ ಶುಲ್ಕ ವಸೂಲಿಯೂ ತಿಂಗಳಿನಿಂದ ತಿಂಗಳಿಗೆ ಹೆಚ್ಚುತ್ತಿದ್ದು, ಅದರಂತೆ ಅಕ್ಟೋಬರ್ ತಿಂಗಳಲ್ಲಿ 2 ಸಾವಿರ ಕೋಟಿ ರೂ.ಗೂ ಹೆಚ್ಚಿನ ಟೋಲ್ ಶುಲ್ಕ ವಸೂಲಿಯಾಗಿದೆ.
ಕರೊನಾ ನಡುವೆಯೂ ಹೆಚ್ಚಳ: ಲಾಕ್ಡೌನ್ ಮತ್ತು ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಟೋಲ್ ಶುಲ್ಕ ವಸೂಲಿ ಪ್ರಮಾಣ ತೀರಾ ಕಡಿಮೆಯಾಗಿತ್ತು. ಆದರೆ, ಲಾಕ್ಡೌನ್ ಸಡಿಲಿಕೆ ನಂತರ ವಾಹನ ಸಂಚಾರ ಹೆಚ್ಚಾದಂತೆಲ್ಲ ಟೋಲ್ ಶುಲ್ಕ ಸಂಗ್ರಹವೂ ಹೆಚ್ಚಾಗಿದೆ. ಅದರಂತೆ ಸೆಪ್ಟೆಂಬರ್ ತಿಂಗಳಲ್ಲಿ 1,940.60 ಕೋಟಿ ರೂ. ಟೋಲ್ ಸಂಗ್ರಹವಾಗಿದ್ದರೆ, ಅಕ್ಟೋಬರ್ನಲ್ಲಿ 2,137.16 ಕೋಟಿ ರೂ. ಶುಲ್ಕ ವಸೂಲಿಯಾಗಿದೆ. 2 ಸಾವಿರ ಕೋಟಿ ರೂ.ಗೂ ಹೆಚ್ಚಿನ ಟೋಲ್ ಶುಲ್ಕ ವಸೂಲಿಯಾಗಿದ್ದು, ಇದೇ ಮೊದಲ ಬಾರಿಯಾಗಿದೆ. ಲಾಕ್ಡೌನ್ ಹಿಂದಿನ ತಿಂಗಳಾದ ಫೆಬ್ರವರಿಯಲ್ಲಿ 1,841 ಕೋಟಿ ರೂ. ಶುಲ್ಕ ವಸೂಲಿಯಾಗಿತ್ತು.