ಹನೂರು: ಪಟ್ಟಣದ ತಹಸೀಲ್ದಾರ್ ಕಚೇರಿಗೆ ತೆರಳುವ ಪ್ರವೇಶ ದ್ವಾರದ ಬಳಿ ಪಟ್ಟಣ ಪಂಚಾಯಿತಿ ವತಿಯಿಂದ ಶೌಚಗೃಹವನ್ನು ನಿರ್ಮಿಸಿ ಒಂದೂವರೆ ವರ್ಷವೇ ಕಳೆದಿದೆ. ಆದರೆ ಬಳಕೆಗೆ ಲಭ್ಯವಾಗಿಲ್ಲ. ಈ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ತಾಲೂಕು ಕೇಂದ್ರವಾದ ಹನೂರು ತಹಸೀಲ್ದಾರ್ ಕಚೇರಿಗೆ ಕೆಲಸ ಕಾರ್ಯಗಳ ನಿಮಿತ್ತ ನಿತ್ಯ ನೂರಾರು ಜನರು ಆಗಮಿಸುತ್ತಾರೆ. ಆದರೆ ಕಳೆದ 5 ವರ್ಷದ ಹಿಂದೆ ಕಚೇರಿಯ ಹಿಂಭಾಗದಲ್ಲಿ ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ನಿರ್ಮಿಸಿರುವ ಶೌಚಗೃಹಕ್ಕೆ ನೀರಿನ ಸೌಕರ್ಯ ಕಲ್ಪಿಸಿರಲಿಲ್ಲ. ಇದರಿಂದ ಶೌಚಗೃಹಕ್ಕೆ ಬೀಗ ಹಾಕಲಾಗಿದೆ. ನೀರಿನ ವ್ಯವಸ್ಥೆ ಕಲ್ಪಿಸಿ ಶೌಚಗೃಹವನ್ನು ಬಳಕೆಗೆ ನೀಡುವಂತೆ ಸಾರ್ವಜನಿಕರು ಹಲವು ಬಾರಿ ಒತ್ತಾಯಿಸಿದ್ದರು. ಆದರೆ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕಿಂಚಿತ್ತೂ ಗಮನಹರಿಸಲಿಲ್ಲ. ಪರಿಣಾಮ ಸಾರ್ವಜನಿಕರು ಶೌಚಕ್ಕಾಗಿ ಸರ್ಕಾರಿ ಹಾಗೂ ಖಾಸಗಿ ಬಸ್ ನಿಲ್ದಾಣದ ಶೌಚಗೃಹ ಹಾಗೂ ಬಯಲಿನ ಮೊರೆ ಹೋಗಬೇಕಿತ್ತು. ಇದರಿಂದ ಸಾರ್ವಜನಿಕರು ಅದರಲ್ಲೂ ಮಹಿಳೆಯರು ಹಾಗೂ ವೃದ್ಧರು ಹೆಚ್ಚಿನ ತೊಂದರೆ ಅನುಭವಿಸುವಂತಾಗಿತ್ತು. ಈ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.
ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪಪಂ ವತಿಯಿಂದ ಸುಮಾರು 3 ಲಕ್ಷ ರೂ. ವೆಚ್ಚದಲ್ಲಿ ಕಚೇರಿಗೆ ತೆರಳುವ ಪ್ರವೇಶ ದ್ವಾರದ ಬಳಿ ಮಹಿಳೆ ಹಾಗೂ ಪುರುಷರಿಗೆ ಪ್ರತ್ಯೇಕವಾಗಿ ಶೌಚಗೃಹ ನಿರ್ಮಿಸಿ ಒಂದೂವರೆ ವರ್ಷವೇ ಕಳೆದಿದೆ. ಆದರೆ ಈ ಶೌಚಗೃಹಕ್ಕೂ ನೀರಿನ ಸೌಕರ್ಯ ಒದಗಿಸಿಲ್ಲ. ಇದರಿಂದ ಬೀಗ ಹಾಕಲಾಗಿದೆ. ಪರಿಣಾಮ ಲಕ್ಷಾಂತರ ರೂ. ವ್ಯಯಿಸಿ ನಿರ್ಮಿಸಿದ ಶೌಚಗೃಹ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷೃದಿಂದ ಬಳಕೆಗೆ ಲಭ್ಯವಾಗಿಲ್ಲ. ಹಾಗಾಗಿ ಸಾರ್ವಜನಿಕರು ಶೌಚಕ್ಕಾಗಿ ಹಿಂದಿನ ಪರಿಸ್ಥಿತಿಯನ್ನೇ ಎದುರಿಸುತ್ತಿದ್ದು ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದಾರೆ.
ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಇತ್ತ ಗಮನಹರಿಸಿ ನೀರಿನ ಸೌಕರ್ಯ ಕಲ್ಪಿಸುವುದರ ಮೂಲಕ ಶೌಚಗೃಹ ಬಳಕೆಗೆ ಅನುವು ಮಾಡಿಕೊಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.