ತಿಪಟೂರು: ಮಕ್ಕಳ ದಿನಾಚರಣೆ ಸಿದ್ಧತೆಯಲ್ಲಿ ತೊಡಗಿದ್ದ ಹಾಲ್ಕುರಿಕೆ ಅಂಗನವಾಡಿ ಸಹಾಯಕಿಯ ಕತ್ತು ಕೊಯ್ದು ಕೊಲೆ ಮಾಡಲಾಗಿದೆ.
ಅಂಗನವಾಡಿ ಸಹಾಯಕಿ ಭಾರತಿ (35) ಮೃತೆ. ಪತಿಯ ಅಕ್ಕನ ಮಗ ದಿವಾಕರ್ (25) ಕೊಲೆ ಆರೋಪಿ. ಭಾನುವಾರ ಬೆಳಗ್ಗೆ ಅಂಗನವಾಡಿ ಕೇಂದ್ರದ ಹಿಂಭಾಗಕ್ಕೆ ಎಳೆದೊಯ್ದು ಕತ್ತು, ಎದೆ, ಗಂಟಲಿನ ಭಾಗಗಳಿಗೆ ಚಾಕುವಿನಿಂದ ಚುಚ್ಚಿ ಪರಾರಿಯಾಗಿದ್ದಾನೆ. ಆರೋಪಿ ಪತ್ತೆಗೆ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.
ಅಂಗನವಾಡಿ ಸಹಾಯಕಿಯನ್ನು ದಿವಾಕರ್ ಕೊಲೆ ಮಾಡುವಾಗ ತಡೆಯಲು ಬಂದವರಿಗೂ ಕೊಲೆ ಮಾಡುವುದಾಗಿ ಬೆದರಿಸಿ ಆರೋಪಿ ಪರಾರಿಯಾಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಭಾರತಿಗೆ ಇಬ್ಬರು ಮಕ್ಕಳಿದ್ದು, ಪತಿ ನಾಗರಾಜು ಮೃತಪಟ್ಟ ನಂತರ ಆತನ ಅಕ್ಕನ ಮಗ ದಿವಾಕರ್ ಈಕೆಯ ಮನೆಯಲ್ಲೇ ಇದ್ದ. ದಿವಾಕರ್ ಹಾಲ್ಕುರಿಕೆ ಸಮೀಪದ ಕುರಿಪಾಳ್ಯದ ಬಾಲಕಿಯನ್ನು ಮದುವೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಕ್ಸೋ ಕಾಯ್ದೆಯಡಿ 7 ತಿಂಗಳ ಜೈಲು ಶಿಕ್ಷೆ ಅನುಭವಿಸಿ ಒಂದೂವರೆ ವರ್ಷದ ಹಿಂದೆ ಬಿಡುಗಡೆ ಆಗಿದ್ದ. ಅತ್ತಿಗೆ ಮನೆಯಲ್ಲೇ ವಾಸವಿದ್ದ ದಿವಾಕರನ ದುರ್ವರ್ತನೆ ಸಹಿಸಲಾಗದೆ 15 ದಿನಗಳ ಹಿಂದೆ ಭಾರತಿ ಹೊನ್ನವಳ್ಳಿ ಠಾಣೆಯಲ್ಲಿ ದೂರು ನೀಡಿದ್ದರೆ. ಆದರೆ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎನ್ನಲಾಗಿದೆ. ಹೊನ್ನವಳ್ಳಿ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.