ವಿಕ್ರಮ ನಾಡಿಗೇರ ಧಾರವಾಡ
ಕರ್ನಾಟಕ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತಕ್ಕೆ ಭದ್ರ ಬುನಾದಿ ಹಾಕುವಲ್ಲಿ ಶ್ರಮಿಸಿದ್ದಲ್ಲದೆ, ಧಾರವಾಡ ಸಂಗೀತ ಕ್ಷೇತ್ರದಲ್ಲಿ ದೇಶಾದ್ಯಂತ ಗುರುತಿಸಿಕೊಳ್ಳುವಂತೆ ಮಾಡಿದವರಲ್ಲಿ ಮೇರು ಸಂಗೀತಗಾರ್ತಿ ಡಾ. ಗಂಗೂಬಾಯಿ ಹಾನಗಲ್ ಸಹ ಒಬ್ಬರು. ಇಂತಹ ಮೇರು ಗಾಯಕಿ ಜನಿಸಿದ ಮನೆ ಹಾಳಾಗಿದ್ದರೂ ಸರ್ಕಾರ ಮರು ನಿರ್ಮಾಣಕ್ಕೆ ನಿರ್ಲಕ್ಷ್ಯ ವಹಿಸಿರುವುದು ದುರದೃಷ್ಟವೇ ಸರಿ.
ಗಾನಗಂಗೆ ಡಾ. ಗಂಗೂಬಾಯಿ ಹಾನಗಲ್ ಜನಿಸಿದ, ಇಲ್ಲಿನ ಶುಕ್ರವಾರ ಪೇಟೆ ನಿವಾಸವನ್ನು ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸಿ 2008ರಲ್ಲಿ ಉದ್ಘಾಟಿಸಲಾಗಿತ್ತು. ಅಂದಿನಿಂದ ಸುಮಾರು 4 ವರ್ಷ ಕಾಲ ಉತ್ತಮ ನಿರ್ವಹಣೆಗೊಂಡ ಕಟ್ಟಡ, ನಂತರದಲ್ಲಿ ನಿರ್ಲಕ್ಷಕ್ಕೆ ಒಳಗಾಗಿ ಭೂತ ಬಂಗಲೆಯಾಗಿದೆ.
ವಸ್ತು ಸಂಗ್ರಹಾಲಯ ನಿರ್ಮಾಣ ಬಳಿಕ ಸಂಗೀತ ತರಗತಿ ನಡೆಸಲಾಗುತ್ತಿತ್ತು. ಪರ ಊರುಗಳಿಂದ ಆಗಮಿಸಿದ ಸಂಗೀತಾಸಕ್ತರೂ ಭೇಟಿ ನೀಡುತ್ತಿದ್ದರು. ಆದರೆ ಸೂಕ್ತ ನಿರ್ವಹಣೆ ಇಲ್ಲದೆ ಶಿಥಿಲಾವಸ್ಥೆಗೆ ತಲುಪಿದ ಮನೆಯ ಮೇಲ್ಛಾವಣಿ ಕುಸಿದಿದೆ. ಮುಖ್ಯ ದ್ವಾರ ಸಂರ್ಪೂಣ ಹಾಳಾಗಿ ಪ್ರಾಣಿಗಳ ವಾಸಸ್ಥಾನವಾಗಿದೆ.
ಸರ್ಕಾರದ ಆದೇಶದಂತೆ 2007ರ ಜೂ. 29ರಂದು 10 ಲಕ್ಷ ರೂ.ಗೆ ಮನೆ ಖರೀದಿಸಿದ್ದ ಜಿಲ್ಲಾಡಳಿತ, 15 ಲಕ್ಷ ರೂ.ದಲ್ಲಿ ನವೀಕರಣ ಕಾರ್ಯ ನಡೆಸಿ ವಸ್ತು ಸಂಗ್ರಹಾಲಯ ಮಾಡಿತ್ತು. ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 2008ರ ಸೆ. 23ರಂದು ವಸ್ತು ಸಂಗ್ರಹಾಲಯ ಉದ್ಘಾಟಿಸಿದ್ದರು. ಗಂಗಜ್ಜಿ 96ನೇ ಜನ್ಮದಿನ (5-3-2008)ದಂದು ವಸ್ತು ಸಂಗ್ರಹಾಲಯದ ನಿರ್ವಹಣೆ ಜವಾಬ್ದಾರಿಯನ್ನು ಹಾನಗಲ್ ಮ್ಯೂಸಿಕ್ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಮನೋಜ್ ಹಾನಗಲ್ ಅವರಿಗೆ ಕೆಲ ಷರತ್ತಿನೊಂದಿಗೆ ವಹಿಸಲಾಗಿತ್ತು.
ಆದರೆ ಷರತ್ತಿನಂತೆ ಸಣ್ಣ ಪುಟ್ಟ ದುರಸ್ತಿಗಳನ್ನು ಪ್ರತಿಷ್ಠಾನ ಮಾಡಲಿಲ್ಲ. ಅದು ಬೃಹತ್ ಮಟ್ಟಕ್ಕೆ ತಲುಪಿದಾಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಡಳಿತ ಪ್ರತಿಷ್ಠಾನವನ್ನು ದೂರುತ್ತ ಕುಳಿತ ಕಾರಣ ಈ ಹಂತಕ್ಕೆ ತುಲುಪಿದೆ ಎಂಬುದು ಸಂಗೀತ ಅಭಿಮಾನಿಗಳ ಆರೋಪ. ಕಟ್ಟಡ ನವೀಕರಣ ಬದಲು ಹೊಸದನ್ನೇ ಕಟ್ಟಬೇಕು. ಇದಕ್ಕಾಗಿ 2018ರಲ್ಲಿ ನಿರ್ಮಿತಿ ಕೇಂದ್ರದಿಂದ 35 ಲಕ್ಷ ರೂ. ವೆಚ್ಚದ ಕ್ರಿಯಾಯೋಜನೆ ರೂಪಿಸಿ ಪ್ರಸ್ತಾವ ಸಲ್ಲಿಸಲಾಗಿತ್ತು. ಬಳಿಕ 2020-21ರಲ್ಲಿ ಲೋಕೋಪಯೋಗಿ ಇಲಾಖೆಯಿಂದ ಅಂದಾಜು ಕೋಟಿ ರೂ. ಕ್ರಿಯಾ ಯೋಜನೆ ರೂಪಿಸಿದ್ದರು. ಆದರೆ ಇದ್ಯಾವುದಕ್ಕೂ ಸರ್ಕಾರ ಮಾತ್ರ ಕ್ಯಾರೆ ಎಂದಿಲ್ಲ.
ಸರ್ಕಾರ ಲಕ್ಷಾಂತರ ರೂ. ವ್ಯಯಿಸಿ ನಿಮಿರ್ಸಿದ ವಸ್ತು ಸಂಗ್ರಹಾಲಯವನ್ನು ಸಂಬಂಧಿಸಿದವರು ಸರಿಯಾಗಿ ನಿರ್ವಹಣೆ ಮಾಡದಿದ್ದರೆ ಜನರ ಹಣ ಹೇಗೆ ಪೋಲಾಗಲಿದೆ ಎಂಬುದಕ್ಕೆ ಈ ಸಂಗ್ರಹಾಲಯವೇ ಸಾಕ್ಷಿ.
ದುಪಟ್ಟು ಖರ್ಚು: ಸಣ್ಣ ಪುಟ್ಟ ದುರಸ್ತಿಗಳನ್ನು ನಿರ್ಲಕ್ಷಿಸಿದ್ದರಿಂದ ಇಡೀ ಕಟ್ಟಡವನ್ನೇ ಮತ್ತೆ ನಿಮಿರ್ಸುವ ಸ್ಥಿತಿ ಬಂದಿದೆ. 17 ವರ್ಷಗಳ ಹಿಂದೆ ಲಕ್ಷಾಂತರ ರೂ. ವ್ಯಯಿಸಿ ನಿಮಿರ್ಸಿದ್ದ ಕಟ್ಟಡ ಕಾಪಾಡಿಕೊಳ್ಳಲು ಸರ್ಕಾರದಿಂದ ಆಗಲಿಲ್ಲ. ಇಲಾಖೆ ಅನುದಾನಕ್ಕೆ ಪತ್ರ ಬರೆದರೂ ನೀಡಿಲ್ಲ. ಹೀಗಾಗಿ ಮತ್ತೆ ನಿರ್ಮಿತಿ ಕೇಂದ್ರದಿಂದ ಜಿಲ್ಲಾಧಿಕಾರಿ ವರದಿ ಕೇಳಿದ್ದಾರೆ. ವರದಿ ಬಂದ ಬಳಿಕವೇ ಮುಂದಿನ ಕ್ರಮವಾಗಲಿದೆ.
ಸಂಗ್ರಹಾಲಯದಲ್ಲಿದ್ದ ವಸ್ತುಗಳು: ಗಂಗಜ್ಜಿಯ ಅನೇಕ ಬಗೆಯ ಭಾವಚಿತ್ರಗಳು, ಅವರು ನುಡಿಸುತ್ತಿದ್ದ ತಂಬೂರಿಯನ್ನು ಗಾಜಿನಲ್ಲಿ ಹಾಕಿ ಪ್ರದರ್ಶನಕ್ಕಿಡಲಾಗಿತ್ತು. ಇದಲ್ಲದೆ ಗಂಗಜ್ಜಿಗೆ ದೊರೆತ ಪ್ರಶಸ್ತಿಗಳ ಮಾಹಿತಿ ಸೇರಿ ಅನೇಕ ಸಂಗೀತ ಪರಿಕರಗಳನ್ನು ಯುವ ಪೀಳಿಗೆಗೆ ಪರಿಚಯಿಸಲು ಮ್ಯೂಸಿಯಂನಲ್ಲಿ ಇಡಲಾಗಿತ್ತು. ಇದರಲ್ಲಿನ ಕೆಲ ಭಾವಚಿತ್ರಗಳು ಹಾಗೂ ತಂಬೂರಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಗೆ ಸ್ಥಳಾಂತರಿಸಲಾಗಿದೆ.
ಗಂಗೂಬಾಯಿ ಹಾನಗಲ್ ಮ್ಯೂಸಿಯಂ ಕಟ್ಟಡ ಸಂರ್ಪೂಣ ಹಾಳಾಗಿದೆ. ನವೀಕರಣ ಅಸಾಧ್ಯವಾಗಿದ್ದು, ಹೊಸ ಕಟ್ಟಡವನ್ನೇ ನಿರ್ಮಿಸಬೇಕು. ಈ ವಿಷಯವಾಗಿ ನಿರ್ಮಿತಿ ಕೇಂದ್ರದಿಂದ ವರದಿ ಕೇಳಲಾಗಿದೆ. ವರದಿ ಬಂದ ಬಳಿಕವೇ ಮುಂದಿನ ಯೋಜನೆ ಸಿದ್ಧವಾಗಲಿದೆ.*ಕುಮಾರ ಬೆಕ್ಕೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ
ವಸ್ತು ಸಂಗ್ರಹಾಲಯವಾಗಿದ್ದ ಗಂಗಜ್ಜಿ ಜನಿಸಿದ ಮನೆ ಪಾಳು ಬಿದ್ದಿದೆ. ಹೊಸ ಕಟ್ಟಡ ನಿರ್ಮಿಸಬೇಕಲ್ಲದೆ, ವರಕವಿ ಬೇಂದ್ರೆ ಭವನ ಮಾದರಿಯಲ್ಲಿ ಸಿದ್ಧಪಡಿಸಿ, ನಿತ್ಯ ಸಂಗೀತ ಪಾಠ ನಡೆಸುವ ವ್ಯವಸ್ಥೆ ಆಗಬೇಕು. ಅಂದಾಗಲೇ ಡಾ. ಗಂಗೂಬಾಯಿ ಸಾಧನೆಗೆ ಸೂಕ್ತ ಗೌರವ ಸಲ್ಲಿಸಿದಂತಾಗುತ್ತದೆ. ಈ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಈ ಅಧಿವೇಶನದಲ್ಲೇ ಅನುದಾನ ನೀಡಬೇಕು.*ಉದಯ ಯಂಡಿಗೇರಿ