ಮೈಸೂರು: ಮೈಸೂರು ರೈಲ್ವೆ ನಿಲ್ದಾಣವನ್ನು ಮತ್ತಷ್ಟು ಜನಸ್ನೇಹಿ ಮಾಡುವ ಉದ್ದೇಶದಿಂದ ರೈಲ್ವೆ ಇಲಾಖೆಯು 200 ಕೋಟಿ ರೂ. ವೆಚ್ಚದಲ್ಲಿ ಮೂರನೇ ಪ್ರವೇಶದ್ವಾರ ನಿರ್ಮಿಸಲು ಉದ್ದೇಶಿಸಿದೆ.
ರಾಜಧಾನಿ ಬೆಂಗಳೂರು ನಂತರ ಮೈಸೂರು ಅತಿ ವೇಗವಾಗಿ ಬೆಳೆಯುತ್ತಿದೆ. ಮೈಸೂರು ರೈಲು ನಿಲ್ದಾಣದಿಂದ ಅಂದಾಜು 50 ಸಾವಿರಕ್ಕೂ ಹೆಚ್ಚು ಜನರು ನಿತ್ಯ ಪ್ರಯಾಣಿಸುತ್ತಾರೆ. ಇದರಲ್ಲಿ ಉದ್ಯೋಗಸ್ಥರು, ವಿದ್ಯಾರ್ಥಿಗಳು, ಮಹಿಳೆಯರ ಸಂಖ್ಯೆಯೇ ಹೆಚ್ಚು. ಮೈಸೂರು-ಬೆಂಗಳೂರು ರೈಲಿಗಂತೂ ಹೆಚ್ಚಿನ ಬೇಡಿಕೆ ಇದೆ. ಇದನ್ನು ಗಮನಿಸಿ ನೈಋತ್ಯ ರೈಲ್ವೆ ಮೈಸೂರು ವಿಭಾಗವು ಟಿಕೆಟ್ ಕೌಂಟರ್‌ನಲ್ಲಿ ಸಾಲು ತಪ್ಪಿಸಲು ಹಾಗೂ ವ್ಯವಸ್ಥಿತ ಪಾರ್ಕಿಂಗ್ ವ್ಯವಸ್ಥೆ ನೀಡುವ ಉದ್ದೇಶದಿಂದ ಮೂರನೇ ಪ್ರವೇಶ ದ್ವಾರ ತೆರೆಯಲು ನಿರ್ಧರಿಸಿದೆ.