ಪ್ರಭುಸ್ವಾಮಿ ಅರವಟಗಿಮಠ ನರೇಗಲ್ಲ
ಖಾಸಗಿ ಶಿಕ್ಷಣ ಸಂಸ್ಥೆಗಳ ಆಕರ್ಷಕ ಮೂಲ ಸೌಲಭ್ಯಗಳಿಂದಾಗಿ ವಿದ್ಯಾರ್ಥಿಗಳು ಹಾಗೂ ಪಾಲಕರು ಸಹಜವಾಗಿಯೇ ಅತ್ತ ವಾಲುತ್ತಿದ್ದಾರೆ. ಇದಕ್ಕೆ ಅಪವಾದ ಎನ್ನುವಂತೆ ಸಮೀಪದ ಕೋಚಲಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿಗೆ ಗ್ರಾಮಸ್ಥರೇ ಚಂದಾ ನೀಡಿ ಉತ್ತೇಜನ ನೀಡುತ್ತಿದ್ದಾರೆ. ಶಿಕ್ಷಕರು ದೇಣಿಗೆ ಸಂಗ್ರಹಿಸಿ ಶಾಲೆಯನ್ನು ಸುಂದರಗೊಳಿಸಿದ್ದಾರೆ.
ಕನ್ನಡ ಶಾಲೆಗಳ ಮಹತ್ವ: ಇತ್ತೀಚೆಗೆ ಪ್ರತಿಯೊಂದು ಕ್ಷೇತ್ರವೂ ವಾಣಿಜ್ಯೀಕರಣಗೊಂಡಿದೆ. ಶಿಕ್ಷಣವೂ ವ್ಯಾಪಾರೀಕರಣ ಆಗಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರಿ ಶಾಲೆಯೊಂದರ ಉಳಿವಿಗಾಗಿ ಶಿಕ್ಷಕರಾದ ವಿಜಯಕುಮಾರ ಡಿ.ಆರ್., ಎಸ್.ಬಿ. ಕೊಟ್ರಶೆಟ್ಟಿ, ಮಂಜುಳಾ ಕೆಂಗಾರ ಟೊಂಕ ಕಟ್ಟಿ ನಿಂತಿದ್ದಾರೆ. ಸರ್ಕಾರಿ ಶಾಲೆಗಳ ಬಗ್ಗೆ ಪಾಲಕರಲ್ಲಿ ಜಾಗೃತಿ ಮೂಡಿಸುವ ಮೂಲಕ ಮತ್ತು ಅವರಿಗೆ ಕನ್ನಡದಲ್ಲಿ ಶಿಕ್ಷಣ ಪಡೆಯಲು ಪ್ರೇರಣೆ ನೀಡುತ್ತಿದ್ದಾರೆ. ಮಕ್ಕಳಿಗೆ ಸರ್ಕಾರಿ ಶಾಲೆಯಲ್ಲೇ ದಾಖಲಾತಿ ಮಾಡಿಸಿ, ಸರ್ಕಾರದಿಂದ ದೊರೆಯುವ ಸೌಲಭ್ಯ, ಗುಣಮಟ್ಟದ ಶಿಕ್ಷಣವನ್ನು ಮಕ್ಕಳಿಗೆ ನೀಡುತ್ತಿದ್ದಾರೆ.
ದೇಣಿಗೆ ಹಣದಲ್ಲಿ ಶಾಲೆಯಲ್ಲಿ ಪಾಳುಬಿದ್ದ ಕೊಠಡಿಗೆ ಬಣ್ಣ ನೀಡಿ, ಕನ್ನಡದ ಮೊದಲ ಪದದಿಂದ ಹಿಡಿದು ಕನ್ನಡ ಸಾಹಿತಿಗಳ ಪರಿಚಯ, ಪ್ರಮುಖ ಪ್ರಶಸ್ತಿ ಪಡೆದಿರುವ ವ್ಯಕ್ತಿಚಿತ್ರಗಳು, ವ್ಯಾಕರಣಾಂಶದ ಮಾಹಿತಿ ಗೋಡೆ ಮೇಲೆ ಚಿತ್ರಿಸಲಾಗಿದೆ. ಜತೆಗೆ ಮಕ್ಕಳಲ್ಲಿ ಕನ್ನಡ ಪುಸ್ತಕ ಓದುವ ಹವ್ಯಾಸ ಬೆಳೆಸುವ ನಿಟ್ಟಿನಲ್ಲಿ ಕನ್ನಡ ಇತಿಹಾಸ ಸಾರುವ ಪುಸ್ತಕಗಳನ್ನು ಒಳಗೊಂಡ ಕಿರುಗ್ರಂಥಾಲಯ ಸ್ಥಾಪಿಸಲಾಗಿದೆ.
ಏನೆಲ್ಲ ಕೆಲಸಗಳಾಗಿವೆ?
ಕೋಚಲಾಪುರ 59 ಕುಟುಂಬಗಳನ್ನು ಹೊಂದಿರುವ ಸಣ್ಣ ಗ್ರಾಮ. ಶಿಕ್ಷಕರು, ಹಳೇ ವಿದ್ಯಾರ್ಥಿಗಳು, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು ಶಾಲೆಯನ್ನು ಅಭಿವೃದ್ಧಿಪಡಿಸುವ ಹುಮಸ್ಸಿನೊಂದಿಗೆ ಗ್ರಾಮಸ್ಥರಿಂದ 48,103 ರೂ. ಚಂದಾ ಸಂಗ್ರಹ ಮಾಡಿದ್ದಾರೆ. ಕರ್ತವ್ಯನಿರತ ಶಿಕ್ಷಕರು ಕೂಡ ಆರ್ಥಿಕ ಸಹಾಯ ಮಾಡಿದ್ದಾರೆ. ಹೀಗೆ ಜಮೆಯಾದ ಹಣದಲ್ಲಿ ಶಾಲೆಯ 8 ಕೊಠಡಿ ಮತ್ತು ಗೋಡೆಗಳಿಗೆ ಬಣ್ಣ ಬಳಿಯಲಾಗಿದೆ. ಕಿತ್ತು ಹೋಗಿದ್ದ ಕಿಟಕಿಗಳ ಮರುಜೋಡಣೆ ಮಾಡಲಾಗಿದೆ. ಸಿಸಿ ಕ್ಯಾಮರಾ ಹಾಕಲಾಗಿದೆ, ಗೋಡೆಬರಹ ಸೇರಿ ಅನೇಕ ಸೌಲಭ್ಯಗಳನ್ನು ಕಲ್ಪಿಸಿ ಇಡೀ ಕಟ್ಟಡ ಆಕರ್ಷಕಗೊಳಿಸಲಾಗಿದೆ.