ಜಿಲ್ಲೆ

ದಿನಕ್ಕೊಬ್ಬ ತಹಸೀಲ್ದಾರ್​ ಹಾಜರ್​!

ಕೋಲಾರ ಡೆಸ್ಕ್

ಬಂಗಾರಪೇಟೆ: ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್​ ಕುರ್ಚಿಗಾಗಿ ಹಗ್ಗಾಜಗ್ಗಾಟ ಮುಂದುವರಿದಿದೆ. ಸೋಮವಾರ ವೆಂಕಟೇಶಪ್ಪ ಮಂಗಳವಾರ ಸುಜಾತಾ ಕಚೇರಿಗೆ ಹಾಜರಾಗಿದ್ದು, ಕಾನೂನು ಸಮರದಿಂದಾಗಿ ತಾಲೂಕಿನ ಜನತೆ ಸಂಕಷ್ಟ ಅನುಭವಿಸುವಂತಾಗಿದೆ.

ತಾಲೂಕು ಕಚೇರಿಯ ಇಬ್ಬರು ತಹಸೀಲ್ದಾರರ ನಡುವಿನ ಕಾನೂನು ಸಮರ ವಾರ ಕಳೆದಿದ್ದ ನಡೆಯುತ್ತಲ್ಲೇ ಇದ್ದು, ಇಂದಿಗೂ ಯಾರು ಕಾಯಂ ತಹಸೀಲ್ದಾರರು ಎಂಬುದು ಗೊತ್ತಾಗದೇ ಜನ ಗೊಂದಲಕ್ಕೀಡಾಗಿದ್ದಾರೆ.

5 ತಿಂಗಳ ಹಿಂದೆ ವರ್ಗಾವಣೆಯಾಗಿ ಬಂದ ತಹಸೀಲ್ದಾರ್​ ಎಸ್​.ವೆಂಕಟೇಶಪ್ಪ ಅವರ ಕಾರ್ಯವೈಖರಿ ಸರಿ ಇಲ್ಲ ಎಂಬ ದೂರಿನ ಮೇರೆಗೆ ಸರ್ಕಾರ ಡಿ.31 ರಂದು ಅವರನ್ನು ಡಿಸಿ ಕಚೇರಿಗೆ ಪುರಸಭೆ ತಹಸೀಲ್ದಾರರನ್ನಾಗಿ ವರ್ಗಾವಣೆ ಮಾಡಿ, ಅವರ ಸ್ಥಾನಕ್ಕೆ ಮುಜರಾಯಿ ತಹಸೀಲ್ದಾರ್​ ಆಗಿದ್ದ ಕೆ.ಎನ್​.ಸುಜಾತಾ ಅವರನ್ನು ನೇಮಕ ಮಾಡಿತು. ಇದರ ನಡುವೆ ಎಸ್​.ವೆಂಕಟೇಶಪ್ಪ ಕೆಇಟಿಯಿಂದ ವರ್ಗಾವಣೆ ಆದೇಶಕ್ಕೆ ತಡೆಯಾಜ್ಞೆ ತಂದಿದ್ದಾರೆ. ಸದ್ಯ ಕುರ್ಚಿ ಪ್ರಹಸನ ಮುಗಿಯದ ಅಧ್ಯಾಯವಾಗಿದೆ.

ಎಸ್​.ವೆಂಕಟೇಶಪ್ಪ ಸೋಮವಾರ ತಹಸೀಲ್ದಾರ್​ ಕುರ್ಚಿಯಲ್ಲಿ ಪ್ರತ್ಯಕ್ಷರಾಗಿದ್ದರು. ಮಂಗಳವಾರ ಸಿದ್ದರಾಮೇಶ್ವರ ಜಯಂತಿಗೆ ಕೆ.ಎನ್​.ಸುಜಾತಾ ಹಾಜರಾಗಿ ತಹಸೀಲ್ದಾರ್​ ಕುರ್ಚಿಯಲ್ಲಿ ಕೂತ್ತಿದ್ದರು.

ತಹಸೀಲ್ದಾರ್​ ವೆಂಕಟೇಶಪ್ಪ ಅವರ ಕೆಇಟಿ ಆದೇಶದ ಬಗ್ಗೆ ಮಾರ್ಗದರ್ಶನ ನೀಡಲು ಕೋರಿ ಜ.4 ರಂದು ಕಂದಾಯ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಜಿಲ್ಲಾಧಿಕಾರಿ ಡಾ.ರವಿ ಪತ್ರ ಬರೆದಿದ್ದಾರೆ. ಸರ್ಕಾರದಿಂದ ಯಾವುದೇ ಮಾಹಿತಿ ಬಂದಿಲ್ಲ ಎಂದು ಹೇಳಲಾಗುತ್ತಿದೆ. ಇದರ ನಡುವೆ ತಹಸೀಲ್ದಾರ್​ ಕುರ್ಚಿ ಹಗ್ಗಾಜಗ್ಗಾಟ ಸಿಬ್ಬಂದಿಗೂ ಗೊಂದಲ ಉಂಟುಮಾಡಿದೆ.

"ಕೆಇಟಿಯಲ್ಲಿ ವರ್ಗಾವಣೆ ಆದೇಶ ರದ್ದು ಮಾಡಿದ ಕಾರಣ ರಿಲಿವಿಂಗ್​ ಪತ್ರದ ಪ್ರಶ್ನೆಯೇ ಬರುವುದಿಲ್ಲ. ಮೇಲಧಿಕಾರಿಗಳ ನಿರ್ದೇಶನದಂತೆ ಸೋಮವಾರ ಕಚೇರಿಗೆ ಹಾಜರಾಗಿ ಕೆಲಸ ನಿರ್ವಹಿಸಿದ್ದೇನೆ. ಬುಧವಾರ ಕೋರ್ಟ್​ಗೆ ಹೋಗಬೇಕಾದ ಕಾರಣ ಮಂಗಳವಾರ ರಜೆ ಹಾಕಿದ್ದೇನೆ. ಕೋರ್ಟ್​ನ ಆದೇಶದಂತೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ."

- ಎಸ್​.ವೆಂಕಟೇಶಪ್ಪ

ತಹಸೀಲ್ದಾರ್​

"ವೆಂಕಟೇಶಪ್ಪ ಅವರಿಗೆ ಕೆಇಟಿ ನೀಡಿರುವ ಆದೇಶದ ಬಗ್ಗೆ ಜಿಲ್ಲಾಧಿಕಾರಿ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದು ಮಾರ್ಗದರ್ಶನ ಕೋರಿದ್ದಾರೆ. ಅಲ್ಲಿಂದಲೂ ಯಾವುದೇ ಆದೇಶ ಬಂದಿಲ್ಲ ಹಾಗೂ ಡಿಸಿಯಿಂದ ಯಾವುದೇ ಮೂಮೆಂಟ್​ ಪತ್ರ ಬಂದಿಲ್ಲ. ಆದ್ದರಿಂದ ಸರ್ಕಾರದ ಆದೇಶದಂತೆ ನಾನು ನನ್ನ ಕೆಲಸ ಮಾಡುತ್ತಿದ್ದೇನೆ. ನ್ಯಾಯಾಲಯದ ಆದೇಶಕ್ಕೆ ಪ್ರತಿಯೊಬ್ಬರೂ ತಲೆ ಬಾಗಲೇಬೇಕು. ಅದರ ಪ್ರಕಾರ ಮೂಮೆಂಟ್​ ಪತ್ರ ತಂದರೆ ಹೋಗುತ್ತೇನೆ. ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಗೆ ಹೋಗಿದ್ದೆ. ಅವರು ಬಂದು ಸಿಟಿಸಿಗೆ ಸಹಿ ಮಾಡಿದ್ದಾರೆ. ನಮ್ಮ ಮಧ್ಯೆ ಯಾವುದೇ ವೈಯಕ್ತಿಕ ದ್ವೇಷ ಇಲ್ಲ. ಸರ್ಕಾರದ ಆದೇಶ ಪಾಲನೆ ಮಾಡುತ್ತಿದ್ದೇನೆ."

- ಕೆ.ಎನ್​.ಸುಜಾತಾ ತಹಸೀಲ್ದಾರ್​