ಜಿಲ್ಲೆ

ಕಳಪೆ ಬೀಜ, ಗೊಬ್ಬರ ಮಾರಿದರೆ ಹುಷಾರ್!

ಬೆಳಗಾವಿ: ಕಳಪೆ ಬೀಜ, ಗೊಬ್ಬರ ಮತ್ತು ಕೀಟನಾಶಕ ರೈತರಿಗೆ ಮಾರಾಟವಾಗುವುದನ್ನು ತಡೆಯಲು ಪಣ ತೊಟ್ಟಿರುವ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿಯ ಜಾಗೃತ ಕೋಶವು ಅಂಗಡಿಗಳು ಮತ್ತು ಗೋದಾಮುಗಳನ್ನು ತಪಾಸಣೆ ಮಾಡುತ್ತಿದೆ.

ಜಿಲ್ಲಾದ್ಯಂತ ಮುಂಗಾರು ಪೂರ್ವ ಮಳೆ ಚುರುಕಾಗಿದ್ದು, ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡಿದೆ. ಈ ಬಾರಿ ಜಿಲ್ಲೆಯಲ್ಲಿ 7.3 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲು ಯೋಜಿಸಲಾಗಿದೆ. ರೈತರು ಈಗ ಬಿತ್ತನೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಜಿಲ್ಲಾದ್ಯಂತ 35ಕ್ಕೂ ಹೆಚ್ಚು ರೈತ ಸಂಪರ್ಕ ಕೇಂದ್ರಗಳಿದ್ದು, ಅಲ್ಲಿಂದ ಪ್ರಮಾಣೀಕೃತ ಬೀಜಗಳನ್ನು ರೈತರಿಗೆ ವಿತರಿಸಲಾಗುತ್ತದೆ. ಇಂತಹ ಸಮಯದಲ್ಲಿ ಕಳಪೆ ಬೀಜಗಳು, ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಮಾರುವ ಸಾಧ್ಯತೆ ಇದ್ದು, ಕೃಷಿ ಜಾಗೃತ ಅಧಿಕಾರಿಗಳು ಕೃಷಿ ಮಾರಾಟ ಮಳಿಗೆಗಳು ಮತ್ತು ವಿತರಣಾ ಕೇಂದ್ರಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಅಂಗಡಿಗಳಿಗೆ ಭೇಟಿ ನೀಡಿ ಗುಣಮಟ್ಟ ಪರಿಶೀಲಿಸುತ್ತಿದ್ದಾರೆ.

ಪ್ರತಿ 10 ರಸಗೊಬ್ಬರ ಮತ್ತು ಕೀಟನಾಶಕ ಅಂಗಡಿಗಳಿಗೆ ಒಬ್ಬ ನೋಡಲ್ ಅಧಿಕಾರಿಯನ್ನು ನಿಯೋಜಿಸಲಾಗಿದೆ. ಅನುಮಾನಾಸ್ಪದ ಉತ್ಪನ್ನಗಳನ್ನು ಪರೀಕ್ಷೆಗಾಗಿ ಬೆಳಗಾವಿ ಮತ್ತು ಧಾರವಾಡಕ್ಕೆ ಕಳುಹಿಸಲಾಗುತ್ತಿದೆ. ಕೃಷಿ ಇಲಾಖೆ ಅಧಿಕಾರಿಗಳ ತಂಡ ಎಲ್ಲ ತಾಲೂಕುಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತಿದೆ. ಮಳೆಗಾಲದಲ್ಲಿ ಒಟ್ಟು 10,500 ರಸಗೊಬ್ಬರ, 500 ಬೀಜ ಮತ್ತು 450 ಕೀಟನಾಶಕ ಮಾದರಿಗಳನ್ನು ಸಂಗ್ರಹಿಸಿ ಪರಿಶೀಲಿಸುವ ಗುರಿ ಹೊಂದಿದೆ.

ಕಳಪೆ ಬೀಜ ಬಿತ್ತನೆ ಮಾಡುವುದರಿಂದ ರೈತರಿಗೆ ಆಗಬಹುದಾದ ಹಾನಿ ತಡೆಯಲು ಕೃಷಿ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ವಿವಿಧ ಬೆಳೆಗಳ ಪ್ರತಿ ಬೀಜ ಮಾದರಿಗಳನ್ನು ಪರೀಕ್ಷಿಸಲು ಮತ್ತು ನಿರ್ದಿಷ್ಟ ಸಂಖ್ಯೆಯ ಸಸಿಗಳನ್ನು ಪಡೆದರೆ ಮಾತ್ರ ಅವುಗಳನ್ನು ರೈತರಿಗೆ ವಿತರಿಸಲು ವ್ಯವಸ್ಥೆ ಮಾಡಲಾಗಿದೆ.

ಚಿಲ್ಲರೆ ಮತ್ತು ಸಗಟು ಕೃಷಿ ಮಳಿಗೆಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದ್ದು, ಅಧಿಕಾರಿಗಳ ಪ್ರತ್ಯೇಕ ತಂಡ ರಚಿಸಲಾಗಿದೆ ಎಂದು ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ನಿಯಮ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುತ್ತಿದೆ.

ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಹೆಚ್ಚಿನ ಬೆಲೆಗೆ ಮಾರುವುದು ಮತ್ತು ಕೃತಕ ಕೊರತೆ ಸೃಷ್ಟಿಸುವುದನ್ನು ಪತ್ತೆ ಹಚ್ಚಲಾಗುತ್ತಿದೆ. ಇಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಕಳೆದ ವರ್ಷ 25ಕ್ಕೂ ಹೆಚ್ಚು ಅಂಗಡಿಗಳ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, 10ಕ್ಕೂ ಹೆಚ್ಚು ಅಂಗಡಿಗಳ ಪರವಾನಗಿ ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೇರೆ ಬೇರೆ ಗೊಬ್ಬರವನ್ನು ಡಿಎಪಿ ಎಂದು ಮಾರಾಟ ಮಾಡವುದು ಕಂಡುಬಂದಿದೆ. ಬೇರೆ ರಾಜ್ಯದಲ್ಲಿ ಆಮದು ಆಗುವ ಗೊಬ್ಬರ ಕಳಪೆ ಎಂದು ಗೊತ್ತಾಗಿದೆ. ಕಳಪೆ ಬೀಜ, ಗೊಬ್ಬರ ಮಾರುತ್ತಿದ್ದರೆ ರೈತರು ನೇರವಾಗಿ ನಮಗೆ ದೂರು ನೀಡಬೇಕು. ರೈತರ ಹೆಸರು ಗುಪ್ತವಾಗಿಡುತ್ತೇವೆ ಎಂದು ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಜಾಗೃತಿ ಕೋಶದ ಅಧಿಕಾರಿ ರಾಜಶೇಖರ ಬಿಜಾಪುರ ಪ್ರತಿಕ್ರಿಯೆ ನೀಡಿದ್ದಾರೆ.