ಕೊಳ್ಳೇಗಾಲ: ಮಕ್ಕಳನ್ನು ತಿದ್ದಿ, ಅವರಿಗೆ ಉತ್ತಮ ಜೀವನ ನೀಡುವ ಶಿಲ್ಪಿಗಳೆ ಗುರುಗಳು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.
ಪಟ್ಟಣದ ಶ್ರೀ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಶುರುವಾರ ಜಿಲ್ಲಾ ಪಂಚಾಯಿತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ನಿವೃತ್ತ ಶಿಕ್ಷಕರಿಗೆ ಸನ್ಮಾನ, ತಾಲೂಕು ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದರು.
ನಾವು ಮಾತೆ ಸಾವಿತ್ರಿ ಬಾಯಿ ಫುಲೆ, ಸರ್ವಪಲ್ಲಿ ರಾಧಕೃಷ್ಣನ್ ಸೇರಿದಂತೆ ಇನ್ನಿತರ ಮಹನೀಯರನ್ನು ಸ್ಮರಿಸಬೇಕಿದೆ. ಸ್ವಾತಂತ್ರೃ ಪೂರ್ವದಲ್ಲಿ ಹೆಣ್ಣು ಮಕ್ಕಳಿಗೆ ಓದುವ ಅವಕಾಶ ಇರಲಿಲ್ಲ. ಆದರೆ ಸಾವಿತ್ರಿ ಬಾಯಿ ಫುಲೆ ಅವರು ಇಡೀ ಸಮಾಜದ ಕೆಂಗಣ್ಣಿಗೆ ಗುರಿಯಾದರೂ ಸಹ ಹೆದರದೆ ಹೆಣ್ಣು ಮಕ್ಕಳಿಗೆ ಶಿಕ್ಷಣ ಹೇಳಿಕೊಟ್ಟರು. ನಂತರ ಎಲ್ಲರಿಗೂ ಸಂವಿಧಾನದಡಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಶಿಕ್ಷಣ ಪಡೆಯುವ ಹಕ್ಕನ್ನು ನೀಡಿದ್ದಾರೆ. ಮಹನೀಯರ ಹೋರಾಟ, ಕೊಡುಗೆಯನ್ನು ನಾವು ಎಂದೂ ಮರೆಯಬಾರದು ಎಂದರು.
ಸಾಧಾರಣ ಶಿಕ್ಷಕರು, ಒಳ್ಳೆಯ ಶಿಕ್ಷಕರು, ಉತ್ತಮ ಶಿಕ್ಷಕರು, ಆದರ್ಶ ಶಿಕ್ಷಕರು ಈ ನಾಲ್ಕು ವಿಧದ ಶಿಕ್ಷಕರನ್ನು ನಾವಿಂದು ಕಾಣಬಹುದು. ಎಲ್ಲರೂ ಆದರ್ಶ ಶಿಕ್ಷಕ ರಾಗಬೇಕು. ಮಕ್ಕಳಿಗೆ ಗುಣಮಟ್ಟ ಶಿಕ್ಷಣ ನೀಡ ಬೇಕು ಎಂದು ಸಲಹೆ ನೀಡಿದರು.
ಉತ್ತಮ ಶಿಕ್ಷಕರಿಗೆ ಪ್ರಶಸ್ತಿ: ಸಮಾರಂಭದಲ್ಲಿ ಕೊಳ್ಳೇಗಾಲ ಭವನ್ಸ್ ಗೀತಾ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಮಹೇಶ್ವರಿ, ಎಂಸಿಕೆಸಿ ಪ್ರೌಢಶಾಲೆ ದೈಹಿಕ ಶಿಕ್ಷಣ ಶಿಕ್ಷಕ ಎಸ್.ಸುಧಾಕರ, ಹಿತ್ತಲ ದೊಡ್ಡಿ ಸರ್ಕಾರಿ ಕಿರಿಯ ಪ್ರೌಢಶಾಲೆ ಸಹ ಶಿಕ್ಷಕ ಕೆಂಪರಾಜು, ತೇರಂಬಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯಶಿಕ್ಷಕ ಕಲಿಂ ಶರೀಫ್, ಹೊಸ ಮಾಲಂಗಿ ಸರ್ಕಾರಿ ಪ್ರೌಢಶಾಲೆ ಸಹ ಶಿಕ್ಷಕ ಬಸವರಾಜು, ಜಕ್ಕಳಿ ಅನುದಾನಿತ ಮಾಥ್ಯು ಹಿರಿಯ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಲೀನಾ ಉರ್ಸುಲಾ ಅವರಿಗೆ ತಾಲೂಕಿನ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಬಳಿಕ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರಿಗೆ ವಿವಿಧ ಬೇಡಿಕೆ ಈಡೇರಿಸುವಂತೆ ಮನವಿ ಪತ್ರ ಸಲ್ಲಿಸಿದರು. ಅಂತೆಯೇ ನಿವೃತ್ತ ಶಿಕ್ಷಕರಿಗೆ ಬಿಇಒ ಮಂಜುಳಾ ಅವರನ್ನು ಸನ್ಮಾನಿಸಿ ದರು. ಅಲ್ಲದೆ ಅಕಾಲಿಕವಾಗಿ ಮರಣ ಹೊಂದಿದ ವಿದ್ಯಾರ್ಥಿಗಳ ಪಾಲಕರಿಗೆ ಸಹಾಯಧನ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ರೇಖಾ ರಮೇಶ್, ಉಪಾಧ್ಯಕ್ಷ ಎ.ಪಿ ಶಂಕರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ರಾಜೇಂದ್ರ, ಮೈಸೂರು ವಿಶ್ವ ವಿದ್ಯಾನಿಲಯ ಸಂಜೆ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕಿ ಡಾ.ಕೆ ಸೌಭಾಗ್ಯವತಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಮಂಜುಳಾ, ಬಿಆರ್‌ಸಿ ಡಿ.ಮಹದೇವ ಕುಮಾರ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಂಗಸ್ವಾಮಿ, ದೈಹಿಕ ಶಿಕ್ಷಣ ಪರಿವೀಕ್ಷಕ ಸ್ಟೀವನ್, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಶ್ರೀಧರ್ ಇದ್ದರು.