ಜಿಲ್ಲೆ

ಬಿಸಿಯೂಟದ ತೊಗರಿಬೇಳೆ ಮಾರಾಟ ಮಾಡಿದ್ದ ವಿಡಿಯೋ ವೈರಲ್: ಮುಖ್ಯ ಶಿಕ್ಷಕನ ಅಮಾನತು

ಮಂಡ್ಯ: ಶಾಲಾ ಮಕ್ಕಳಿಗಾಗಿ ಬಿಸಿಯೂಟದ ಯೋಜನೆಯನ್ನು ಜಾರಿಗೆ ತಂದು ಹಲವು ವರ್ಷಗಳೇ ಕಳೆದಿವೆಯಾದರೂ ಬಿಸಿಯೂಟದ ಹೆಸರಲ್ಲಿ ಕಾಳದಂಧೆ ಕೂಡ ಶುರುವಾಗಿದೆ. ಅದೂ ಶಿಕ್ಷಕರಿಂದಲೇ ಎಂಬುದು ವಿಷಾದದ ಸಂಗತಿ.

ಮಂಡ್ಯದಲ್ಲಿ ಮುಖ್ಯ ಶಿಕ್ಷಕ ಬಿಸಿಯೂಟಕ್ಕೆಂದು ಸರ್ಕಾರದಿಂದ ಬರುವ ತೊಗರಿಬೇಳೆ ಮಾರಾಟ ಮಾಡಲು ಹೋಗಿ ಈಗ ಅಮಾನತು ಶಿಕ್ಷೆಗೊಳಗಾಗಿದ್ದಾರೆ.

ಮಳವಳ್ಳಿ ತಾಲೂಕಿನ ಮಾರಗೌಡನಹಳ್ಳಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಕಾಳರಾಜೇಗೌಡ ಅಮಾನತುಗೊಳಗಾದ ಶಿಕ್ಷಕ. ಬಿಸಿಯೂಟದ ತೊಗರಿಬೇಳೇಯನ್ನು ಮಾರಾಟ ಮಾಡುವ ವಿಡಿಯೋ ವೈರಲ್​ ಆಗಿತ್ತು. ಬಳಿಕ ಹಲಗೂರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಬೇಳೆ ಮಾರಾಟ ಮಾಡುತ್ತಿದ್ದ ವಿಡಿಯೋ ವೈರಲ್​ ಆಗಿದ್ದು, ಹಾಗೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದ್ದರಿಂದ ಮುಖ್ಯ ಶಿಕ್ಷಕನಿಗೆ ಅಮಾನತುಗೊಳಿಸಿ ಡಿಡಿಪಿಐ ಎಸ್‌.ಟಿ.ಜವರೇಗೌಡ ಆದೇಶ ಹೊರಡಿಸಿದ್ದಾರೆ. (ದಿಗ್ವಿಜಯ ನ್ಯೂಸ್​)