ಕುಮಟಾ: ಮುಗ್ಧ ಮಕ್ಕಳಲ್ಲಿ ಅಕ್ಷರ ಜ್ಞಾನ ಬಿತ್ತಿ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಮಾಡುವ ಶಕ್ತಿ ಶಿಕ್ಷಕರಲ್ಲಿದೆ. ವಿದ್ಯಾರ್ಥಿಗಳಿಗಾಗಿ ಶಿಕ್ಷಕರು ತಮ್ಮ ಜೀವನ ಮುಡಿಪಾಗಿಟ್ಟಿದ್ದಾರೆ. ಶಿಕ್ಷಕರ ಶ್ರಮ ಗುರುತಿಸಲು ಶಿಕ್ಷಕರ ದಿನಾಚರಣೆ ಉತ್ತಮ ಅವಕಾಶ ಎಂದು ತಹಸೀಲ್ದಾರ್ ಸತೀಶ ಗೌಡ ಹೇಳಿದರು.
ಪಟ್ಟಣದ ಗಿಬ್ ಪ್ರೌಢಶಾಲೆಯ ರಾಜೇಂದ್ರ ಪ್ರಸಾದ ಸಭಾಭವನದಲ್ಲಿ ಜಿಪಂ, ಶಿಕ್ಷಣ ಇಲಾಖೆ, ಭಾರತೀಯ ಸ್ಟೇಟ್ ಬ್ಯಾಂಕ್ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕರಲ್ಲಿ ಒಗ್ಗಟ್ಟಿದೆ. ನೋವು ನಲಿವುಗಳಿಗೆ ಸ್ಪಂದಿಸುವ ಗುಣವಿದೆ. ಮಕ್ಕಳ ಭವಿಷ್ಯ ಶಿಕ್ಷಕರ ಕೈಯಲ್ಲಿದೆ ಎಂದರು.
ನಿವೃತ್ತ ಡಯಟ್ ಪ್ರಾಚಾರ್ಯ ಎಸ್.ಟಿ. ವೈದ್ಯ ಮಾತನಾಡಿ, ಎಲ್ಲ ಮಕ್ಕಳು ಸಮಾನರು, ಅವರೆಲ್ಲರೂ ಸ್ವತಃ ನಿಮ್ಮ ಮಕ್ಕಳಿದ್ದಂತೆ. ಮಕ್ಕಳನ್ನು ಪ್ರೇಮದಿಂದ ಕಾಣಿ. ಶಾಲೆ ದೇವಾಲಯವಿದ್ದಂತೆ, ಇಂದಿನ ಪೀಳಿಗೆ ಉತ್ತಮವಾಗಿ ರೂಪುಗೊಂಡರೆ ದೇಶದ ಭವಿಷ್ಯವೂ ಉತ್ತಮವಾಗುತ್ತದೆ ಎಂದರು.
ನಿವೃತ್ತ ಬಿಇಒ ನಾಗರಾಜ ನಾಯಕ, ಎ.ಬಿ. ಮುಲ್ಲಾ, ಹಲವು ನಿವೃತ್ತ ಶಿಕ್ಷಕರು, ಸಾಧಕ ಶಿಕ್ಷಕರನ್ನು ಸನ್ಮಾನಿಸಲಾಯಿತು. ಸ್ಟೇಟ್ ಬ್ಯಾಂಕ್‌ನ ಮ್ಯಾನೇಜರ್ ಮಂದೀಪ್, ಸಮನ್ವಯಾಧಿಕಾರಿ ರೇಖಾ ನಾಯ್ಕ, ಎಸ್.ಬಿ. ನಾಯಕ, ವಿನಾಯಕ ಹೆಗಡೆ, ರವೀಂದ್ರ ಭಟ್ಟ ಸೂರಿ, ಬಿ.ಜಿ. ನಾಯಕ, ಬೀರದಾಸ ಗುನಗ, ಅನಿಲ ರೊಡ್ರಿಗೀಸ್, ಲಕ್ಷ್ಮೀ ಶೆಟ್ಟಿ ಇನ್ನಿತರರು ಉಪಸ್ಥಿತರಿದ್ದರು. ಬಿಇಒ ರಾಜೇಂದ್ರ ಭಟ್ಟ ಸ್ವಾಗತಿಸಿದರು.