ಚಿಕ್ಕಮಗಳೂರು: ಸಾಧಾರಣ ವ್ಯಕ್ತಿಯೊಬ್ಬ ಅಸಾಮಾನ್ಯ ಸಾಧನೆ ಮೂಲಕ ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಲು ಶಿಕ್ಷಕರ ಪಾತ್ರ ಬಹಳ ಮುಖ್ಯ. ಆ ನಿಟ್ಟಿನಲ್ಲಿ ಅಕ್ಷರಾಭ್ಯಾಸ ಕಲಿಸಿದ ಗುರುಗಳು ಎಂದಿಗೂ ಅಜರಾಮರ ಎಂದು ಸಾಹಿತಿ ಹಳೇಕೋಟೆ ರಮೇಶ್ ತಿಳಿಸಿದರು.
ಮೂಡಿಗೆರೆ ಪಟ್ಟಣದ ಸರ್ಕಾರಿ ಬಾಲಕಿಯರ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಸಿರಿಗನ್ನಡ ವೇದಿಕೆಯಿಂದ ಹಮ್ಮಿಕೊಂಡಿದ್ಧ ಸಾಧಕರಿಗೆ ಅಭಿನಂದನೆ ಹಾಗೂ ಕ್ರೀಡಾ ಸಾಮಾಗ್ರಿ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ವಿದ್ಯೆ ಜೊತೆಗೆ ಶಿಸ್ತು, ಸಂಯಮ, ವಿಧೇಯತೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಮೊಬೈಲ್ ಬಳಕೆಯಿಂದ ವಿದ್ಯಾರ್ಥಿಗಳ ಮಾನಸಿಕ ಅರೋಗ್ಯದ ಮೇಲೆ ವಿಪರೀತ ದುಷ್ಪರಿಣಾಮಗಳು ಬಿರುತ್ತಿರುವುದು ನೋವಿನ ಸಂಗತಿ. ಹೀಗಾಗಿ ಅತಿಹೆಚ್ಚು ಪುಸ್ತಕಗಳ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.
ಸಿರಿಗನ್ನಡ ವೇದಿಕೆ ಪ್ರಧಾನ ಕಾರ್ಯದರ್ಶಿ ಡಾ.ಮೋಹನ್ ರಾಜಣ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ಮನುಷ್ಯನಿಗೆ ಮೌಲ್ಯಧಾರಿತ ಜೀವನ ಕಲಿಸುವುದೇ ನಿಜವಾದ ಶಿಕ್ಷಣ. ಶಿಕ್ಷಕರು ಸಮಾಜದಲ್ಲಿ ಉತ್ತಮ ವ್ಯಕ್ತಿ ಗಳನ್ನು ರೂಪಿಸುವ ಶಿಲ್ಪಗಳಾಗಿದ್ದಾರೆ. ಆದ್ದರಿಂದ ಶಿಕ್ಷಕರು ಮಕ್ಕಳ ನಾಡಿ ಮಿಡಿತ ಅರಿತು ವಿದ್ಯೆ ಕಲಿಸಬೇಕು ಎಂದು ಮನವಿ ಮಾಡಿದರು.
ಸಿರಿಗನ್ನಡ ವೇದಿಕೆ ಅಧ್ಯಕ್ಷ ಎಂ.ಆರ್.ಪೂರ್ಣೇಶ್ ಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಜೀವನ ಬಹಳ ಅಮೂಲ್ಯವಾದದ್ದು. ವ್ಯಾಸಂಗದ ಜೊತೆಗೆ ಮುಂದಿನ ಜವಾಬ್ದಾರಿ ಅರಿವು ಕೂಡ ನಿಮಗಿರಬೇಕು. ಸಮಾಜದಲ್ಲಿ ಉತ್ತಮ ವ್ಯಕ್ತಿಗಳನ್ನು ರೂಪಿಸುವುದು ಶಿಕ್ಷಕರ ಜವಾಬ್ದಾರಿ. ಸಮಾಜದಲ್ಲಿ ಪರಿವರ್ತನೆಯ ಬೆಳಕು ತರುವ ಕೆಲಸ ಶಿಕ್ಷಕರು ಪ್ರಾಮಾಣಿಕವಾಗಿ ಮಾಡಬೇಕು ಎಂದರು.
ಇದೇ ವೇಳೆ ಜಿಲ್ಲಾ ಅತ್ಯುತ್ತಮ ಶಿಕ್ಷಕಪ್ರಶಸ್ತಿ ವಿಜೇತೆ ಯಾಸ್ಮಿನ್ ಸುಲ್ತಾನ್ ಅವರನ್ನು ಸನ್ಮಾನಿಸಲಾಯಿತು. ದಾನಿಗಳಾದ ಚಂದ್ರಮತಿ ಚಂದ್ರಶೇಖರಯ್ಯ ಅವರು ಶಾಲೆಗೆ ಕ್ರೀಡಾ ಸಾಮಗ್ರಿ ವಿತರಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಅಧ್ಯಕ್ಷ ಬಿ.ಎಸ್.ಒಂಕಾರ್, ಖಜಾಂಚಿ. ಸಿರಿಗನ್ನಡ ವೇದಿಕೆಯ ಹಮೀದ್ ಸಬ್ಬೆನಹಳ್ಳಿ, ಪಟ್ಟಣ ಪಂಚಾಯಿತಿ ಸದಸ್ಯೆ ಕಮಲಮ್ಮ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಸಮೀನಾ ಬಾನು, ಮುಖಂಡರಾದ ಮೈದಿನ್ ಇಸ್ಮಾಯಿಲ್, ಚಂದ್ರಮತಿ, ಗಂಗಾಧರಪ್ಪ, ಕುಮಾರ್ ರಾಜ್, ಆನಂದ್ ರಾಜ್, ಶಿಕ್ಷಕರಾದ ತೋಟಪ್ಪ, ಭಾರತಿ ಮತ್ತಿತರರಿದ್ದರು.