ಅರಕಲಗೂಡು: ಕಲಿಕಾ ಹಂತದಲ್ಲೇ ಪ್ರತಿಭೆ ಬೆಳಕಿಗೆ ಬರಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ಎಚ್.ಎಸ್.ಸ್ಮಿತಾ ಹೇಳಿದರು.
ಕಾಲೇಜಿನ ಸಾಂಸ್ಕೃತಿಕ ವೇದಿಕೆ, ಕಾಲೇಜು ಅಭಿವೃದ್ಧಿ ಸಮಿತಿ, ಹಳೇ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ರಾಜ್ಯ ಮಟ್ಟದ ಜನಪದ ಗೀತೆ, ಭಾವಗೀತೆ, ಶಾಸ್ತ್ರೀಯ ಸಂಗೀತ ಹಾಗೂ ರಸಪ್ರಶ್ನೆ ಸ್ಪರ್ಧಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಪ್ರತಿಭೆ ಅಡಗಿರುತ್ತದೆ. ಓದಿನೊಂದಿಗೆ ಇಂತಹ ಕಾರ್ಯಕ್ರಮಗಳ ಮೂಲಕ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದರೆ ಭವಿಷ್ಯದ ಬದುಕಿಗೆ ಸಹಾಯಕವಾಗಲಿದೆ ಎಂದರು.
ಸ್ಪರ್ಧಾ ವಿಜೇತರು: ಜನಪದ ಗೀತೆ ವಿಭಾಗದಲ್ಲಿ ಕೆ.ಆರ್. ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಬಿ.ಕೆ. ಮಧು ಪ್ರಥಮ, ಹರದನಹಳ್ಳಿ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿತ್ಯಾಶ್ರೀ ದ್ವಿತೀಯ ಮತ್ತು ಹೊಳೆನರಸೀಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಭಾನುಮತಿ ಮೂರನೇ ಬಹುಮಾನ ಗಳಿಸಿದರು.
ಭಾವಗೀತೆ ಸ್ಪರ್ಧಾ ವಿಭಾಗದಲ್ಲಿ ಸಕಲೇಶಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಎಸ್. ಪೂಜಾ ಪ್ರಥಮ, ಹೊಳೆನರಸೀಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ವೈಭವಿ ದ್ವಿತೀಯ ಮತ್ತು ಪಡುವಲುಹಿಪ್ಪೆ ಎಚ್.ಡಿ. ದೇವೇಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಚೇತನ್ ಕುಮಾರ್ ಮೂರನೇ ಸ್ಥಾನ ಪಡೆದರು.
ಶಾಸ್ತ್ರೀಯ ಸಂಗೀತ ವಿಭಾಗದಲ್ಲಿ ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿ ಜ್ಯೋತಿ ಜೋಷಿ, ಹೊಳೆನರಸೀ ಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ವೈಭವಿ ದ್ವಿತೀಯ ಹಾಗೂ ಕೆ.ಆರ್. ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಬಿ.ಕೆ. ಮಧು ಮೂರನೇ ಸ್ಥಾನ ಗಳಿಸಿದರು.
ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಎಂ.ಸಿ. ರಂಗಸ್ವಾಮಿ ಅವರು ಕೊಡುಗೆಯಾಗಿದ್ದ ನೀಡಿದ ಬಹುಮಾನವನ್ನು ತಾಲೂಕು ಜನಪದ ಸಾಹಿತ್ಯ ಪರಿಷತ್ತು ಅಧ್ಯಕ್ಷ ದೇವಾನಂದ ವರಪ್ರಸಾದ್, ಕಣಿಯಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ನಾಗಮಣಿ ವಿಜೇತ ವಿದ್ಯಾರ್ಥಿಗಳಿಗೆ ವಿತರಿಸಿದರು.