ಶಿರಸಿ: ಜಿಲ್ಲೆಗೊಂದು ಸಿಂಥೆಟಿಕ್ ಕ್ರೀಡಾಂಗಣವು ಕ್ರೀಡಾಸಾಧನೆಗೆ ಪೂರಕವೆಂಬ ತತ್ವದಲ್ಲಿ ಭಾರತ ಸರ್ಕಾರ ರಾಷ್ಟ್ರೀಯ ಕ್ರೀಡಾ ನೀತಿ ಜಾರಿಗೆ ತಂದು ದಶಕ ಉರುಳಿವೆ. ಆದರೆ, ರಾಷ್ಟ್ರೀಯ ಕ್ರೀಡಾ ನೀತಿಯಿಂದ ಉತ್ತರ ಕನ್ನಡ ಜಿಲ್ಲೆ ವಂಚಿತವಾಗಿದೆ ಎಂದು ಸ್ಪಂದನಾ ಸ್ಪೋಟ್ಸ್ ಅಕಾಡೆಮಿ ಅಧ್ಯಕ್ಷ ರವೀಂದ್ರ ನಾಯ್ಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಕ್ರೀಡಾ ವರ್ಷದ ಪ್ರಾರಂಭದಲ್ಲಿಯೇ, ತೀವ್ರ ಮಳೆಗಾಲ ಎದುರಿಸಬೇಕಾದ ಕ್ರೀಡಾ ಪಟುಗಳಿಗೆ ಸುಸಜ್ಜಿತ ಸರ್ವಋತು ಕ್ರೀಡಾಂಗಣ ಅತ್ಯವಶ್ಯ. ಅವೈಜ್ಞಾನಿಕ ಮತ್ತು ಮಳೆಯಲ್ಲಿಯೇ ಈಗ ಕ್ರೀಡಾಕೂಟ ನಡೆಯುತ್ತಿದೆ. ಕ್ರೀಡಾಂಗಣದ ಭೌತಿಕ ಸಾಮರ್ಥ್ಯ ಹೆಚ್ಚಿಸುವುದರೊಂದಿಗೆ ಮೂಲಸೌಕರ್ಯ ಮತ್ತು ಸೌಲಭ್ಯಕ್ಕೆ ಒತ್ತು ನೀಡುವುದು ಸಮಂಜಸ. ಓಟದ ಪಥ ಕೆಸರುಗದ್ದೆಯಾಗಿದೆ. ಇದರಿಂದಾಗಿ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳು ತಮ್ಮ ನೈಜ ಪ್ರತಿಭೆ ತೋರಿಸಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಅತೀ ಹೆಚ್ಚಿನ ವಿಸ್ತಾರ ಹೊಂದಿರುವ ಖ್ಯಾತಿ ಶಿರಸಿಯ ಜಿಲ್ಲಾ ಮಾರಿಕಾಂಬಾ ಕ್ರೀಡಾಂಗಣಕ್ಕಿದೆ. ಆದರೆ, ಭೌಗೋಳಿಕವಾಗಿ ಉತ್ತರ ಕನ್ನಡಕ್ಕಿಂತಲೂ ಚಿಕ್ಕದಾಗಿರುವ ಕೊಡಗು, ಉಡುಪಿ, ಗದಗ, ಕೊಪ್ಪಳ, ಹಾವೇರಿ, ಬೀದರ್, ಕೋಲಾರ, ವಿಜಯನಗರ, ಬಳ್ಳಾರಿ, ಚಿಕ್ಕಬಳ್ಳಾಪುರ, ಚಿಕ್ಕಮಂಗಳೂರುಗಳಲ್ಲಿ ಸಿಂಥೆಟಿಕ್ ಕ್ರೀಡಾಂಗಣ ಹೊಂದಿದೆ. ಅಲ್ಲದೆ, ಉತ್ತರ ಕರ್ನಾಟಕ ಬಯಲುಸೀಮೆಗಳಂತಾದ ಎಲ್ಲಾ ಜಿಲ್ಲೆಗಳಲ್ಲಿಯೂ ಸಿಂಥೆಟಿಕ್ ಕ್ರೀಡಾಂಗಣ ಹೊಂದಿದೆ. ಆದರೆ, ಮಳೆ ಹೆಚ್ಚಿರುವ ಮಲೆನಾಡು ಮತ್ತು ಕರಾವಳಿ ಪ್ರದೇಶ ಹೊಂದಿರುವ ಉತ್ತರಕನ್ನಡ ಜಿಲ್ಲೆಯಲ್ಲಿ ಸಿಂಥೆಟಿಕ್ ಕ್ರೀಡಾಂಗಣದಿಂದ ವಂಚಿತರಾಗಿರುವುದು ವಿಷಾದಕರ ಎಂದಿದ್ದಾರೆ.