ಭಟ್ಕಳ: ಹೆಸರಾಯಿತು ಕರ್ನಾಟಕ, ಉಸಿರಾಯಿತು ಕನ್ನಡ ಶೀರ್ಷಿಕೆ ಅಡಿಯಲ್ಲಿ ಮೈಸೂರು ರಾಜ್ಯ ಕರ್ನಾಟಕವೆಂದು ನಾಮಕರಣವಾಗಿ 50 ವಸಂತ ಪೂರೈಸಿ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಹೊರಡಿಸಿರುವ ಕರ್ನಾಟಕ ಸಂಭ್ರಮ-50 ರಥ ಭಾನುವಾರ ಭಟ್ಕಳ ಪಟ್ಟಣಕ್ಕೆ ಆಗಮಿಸಿತು.
ಪಟ್ಟಣದ ಶಂಸುದ್ದೀನ್ ಸರ್ಕಲ್ಗೆ ಆಗಮಿಸಿದ ರಥಯಾತ್ರೆಗೆ ಅದ್ದೂರಿಯಾಗಿ ಗೊಂಡ ಸಮಾಜದ ಧಕ್ಕೆ ಕುಣಿತ ಹಾಗೂ ಭಟ್ಕಳ ಝೇಂಕಾರ ಭರತನಾಟ್ಯ ವಿದ್ಯಾರ್ಥಿಗಳು ಪೂರ್ಣ ಕಳಸದೊಂದಿಗೆ ಸ್ವಾಗತ ಮಾಡಿ ತಾಯಿ ಭುವನೇಶ್ವರಿ ದೇವಿಗೆ ಪುಷ್ಪ ನಮನ ಅರ್ಪಿಸಿ ಪೂಜೆ ಸಲ್ಲಿಸಿದರು. ನಂತರ ಮೆರವಣಿಗೆ ಚಾಲನೆ ನೀಡಲಾಯಿತು.
ಬಳಿಕ ಮಾತನಾಡಿದ ಸಹಾಯಕ ಆಯುಕ್ತೆ ನಯನ, ಹೆಸರಾಯಿತು ಕರ್ನಾಟಕ, ಉಸಿರಾಯಿತು ಕನ್ನಡ 50ರ ಸಂಭ್ರಮ ಎಂಬ ಕನ್ನಡದ ರಥ ಭಟ್ಕಳಕ್ಕೆ ಆಗಮಿಸಿದೆ. ಈ ರಥ ಕರ್ನಾಟಕದೆಲ್ಲೆಡೆ ಸಂಚರಿಸುತ್ತಿದೆ. ಇದು ನಮ್ಮ ಭಾವೈಕ್ಯತೆಯ ಸಂಕೇತವಾಗಿದೆ. ಕನ್ನಡವನ್ನು ಎಲ್ಲೆಡೆ ಪಸರಿಸಲಿ ಎಂದರು.
ಪ್ರಭಾರಿ ತಹಸೀಲ್ದಾರ್ ಅಶೋಕ ಭಟ್ ಮಾತನಾಡಿದರು.
ಶನಿವಾರ ಸಂಜೆ ಸಾಗರದಿಂದ ಆಗಮಿಸಿದ ರಥವನ್ನು ಅಧಿಕಾರಿಗಳು ಭಟ್ಕಳ ಗಡಿ ಭಾಗದ ನಾಗವಲ್ಲಿಯಲ್ಲಿ ಸ್ವಾಗತಿಸಿದ್ದರು.
ಪುರಸಭೆ ಮುಖ್ಯಾಧಿಕಾರಿ ನೀಲಕಂಠ ಮೆಸ್ತಾ, ಭಟ್ಕಳ ಕಸಾಪ ಅಧ್ಯಕ್ಷ ಗಂಗಾಧರ ನಾಯ್ಕ, ಸಾಹಿತಿ ಶಂಭು ಹೆಗ್ಡೆ, ಶ್ರೀಧರ್ ಶೇಟ್, ದೈಹಿಕ ಶಿಕ್ಷಕ ಪ್ರಕಾಶ ಶಿರಾಲಿ, ಪುರಸಭೆ ಆರೋಗ್ಯಾಧಿಕಾರಿ ಸೂಜಿಯ ಸೋಮನ್ ಇದ್ದರು.