ಬೆಂಗಳೂರು: ಕಳೆದ ಮೂರು ದಿನಗಳಿಂದ ಅರಮನೆ ಮೈದಾನದ ತ್ರಿಪುರವಾಸಿನಿ ಆವರಣದಲ್ಲಿ ರಾಜ್ಯ ಕೃಷಿ ಇಲಾಖೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಸಾವಯವ ಸಿರಿಧಾನ್ಯ ವಾಣಿಜ್ಯ ಮೇಳಕ್ಕೆ ಶನಿವಾರ ಯಶಸ್ವಿ ತೆರೆಬಿದ್ದಿದೆ.
ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ರೈತರು, ಸಾರ್ವಜನಿಕರು ಸೇರಿ ಒಟ್ಟು 3 ಲಕ್ಷಕ್ಕೂ ಹೆಚ್ಚಿನ ಜನ ಭೇಟಿ ನೀಡಿದ್ದು, ಕೋಟ್ಯಾಂತರ ರೂಪಾಯಿ ವಹಿವಾಟು ನಡೆದಿದೆ. ಜೊತೆಗೆ ವಿವಿಧ ವಿದೇಶಿ ಮತ್ತೂ ದೇಶಿಯ ಕಂಪನಿಗಳ ಜೊತೆಗೆ 185.41 ಕೋಟಿ ರೂಪಾಯಿ ವಹಿವಾಟಿಗೆ ಒಪ್ಪಂದ ಏರ್ಪಟ್ಟಿದೆ.
ದೇಶದ 25 ರಾಜ್ಯಗಳ ಕೃಷಿ ಇಲಾಖೆಗಳು ಮೇಳದಲ್ಲಿ ಭಾಗಿಯಾಗಿದ್ದವು. 5 ರಾಜ್ಯಗಳ ಕೃಷಿ ಸಚಿವರು, ವಿದೇಶದ ಗಣ್ಯರು ಭಾಗಿಯಾಗಿದ್ದು ಮುಂದಿನ ದಿನಗಳಲ್ಲಿ ತಮ್ಮ ರಾಜ್ಯದಲ್ಲೂ ಇಂತಹ ಮೇಳ ಆಯೋಜಿಸುವುದಕ್ಕೆ ಉತ್ಸುಕತೆ ತೋರಿದ್ದಾರೆ.
ಕೊನೆಯ ದಿನದ ಅಂಗವಾಗಿ ನಡೆದ ಸಮಾರೋಪ ಸಮಾರಂಭದಲ್ಲಿ ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ, ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಯಣ, ಮಾಜಿ ಸಚಿವ ನಾರಾಯಣಸ್ವಾಮಿ, ಇಲಾಖೆಯ ನಿರ್ದೇಶಕ ಜಿ.ಟಿ.ಪುತ್ರ ಹಾಗೂ ಕೆಲ ಅಧಿಕಾರಿಗಳು ಪಾಲ್ಗೊಂಡಿದ್ದರು.
ಈ ವೇಳೆ ಮಾತನಾಡದ ಸಚಿವ ಚೆಲುವರಾಯಸ್ವಾಮಿ; ಈ ಹಿಂದಿನ ಎಲ್ಲ ಸಮ್ಮೇಳನಗಳಿಗಿಂತ ಹೆಚ್ಚಿನ ಯಶಸ್ಸು ಈ ಬಾರಿಯ ಮೇಳದಿಂದ ದೊರೆತಿದೆ. ಇಲಾಖೆಯ ಅಧಿಕಾರಿಗಳ ಶ್ರಮ, ರೈತರು ಮತ್ತು ವ್ಯಾಪಾರಿಗಳ ಸಹಕಾರದಿಂದ ಮೇಳ ಯಶಸ್ವಿಯಾಗಿದೆ. ಯುವ ಜನಾಂಗ ಹಾಗೂ ನಾಗರೀಕರು ಸಿರಿಧಾನ್ಯಗಳ ಬಗ್ಗೆ ಹೆಚ್ಚು ಆಸಕ್ತರಾಗಿ ಭೇಟಿ ನೀಡಿ ಪದಾರ್ಥಗಳನ್ನು ಖರೀದಿ ಮಾಡಿರುವುದು ಹೊಸ ಉತ್ಸಾಹ ಮೂಡಿಸಿದೆ ಎಂದರು.
ಕೃಷಿ ಇಲಾಖೆಯಲ್ಲಿ ರೈತರಿಗಾಗಿ ಹಲವು ಯೋಜನೆಗಳಿವೆ. ಅದರಲ್ಲೂ ಯುವ ರೈತರಿಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಇಲಾಖೆ ಬದ್ಧವಾಗಿದ್ದು, ಅದನ್ನು ಬಳಸಿಕೊಳ್ಳಬೇಕು. ವಿಶೇಷವಾಗಿ ಆರೋಗ್ಯಕ್ಕೆ ಹೆಚ್ಚು ಉಪಯುಕ್ತವಾಗಿರುವ ಎಲ್ಲ ಸಿರಿಧಾನ್ಯಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಸುವಂತೆ ಕೇಂದ್ರಕ್ಕೆ ಈಗಾಗಲೇ ಮನವಿ ಮಾಡಿದ್ದೇವೆ. ನಮ್ಮ ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ವಿದೇಶಗಳಿಗೆ ರ್ತು ಮಾಡಲು ಹೆಚ್ಚಿನ ಆದ್ಯತೆ ನೀಡಬೇಕಿದ್ದು, ಮುಂದಿನ ಯುಗ ರೈತರ ಯುಗವಾಗುವಲ್ಲಿ ಎಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದು ಸಚಿವರು ಕರೆ ನೀಡಿದರು.
ದಿನಪೂರ್ತಿ ನಡೆದ ರೈತರ ಕಾರ್ಯಾಗಾರ, ಅಂತರಾಷ್ಟ್ರೀಯ ಸಮ್ಮೇಳನ ಹಾಗೂ ಉತ್ಪಾದಕರು ಮತ್ತು ಮಾರಾಟಗಾರರೊಂದಿಗಿನ ಚರ್ಚೆಯಲ್ಲಿ ರೈತರು ಪಾಲ್ಗೊಂಡು ತಜ್ಞರು ನೀಡಿದ ಸಲಹೆ, ಮಾರ್ಗದರ್ಶನಗಳನ್ನು ಪಡೆದರು.
ರೈತ ಕಾರ್ಯಾಗಾರದಲ್ಲಿ ರೈತರ ಅನುಕೂಲಕ್ಕೆ ರೂಪಿಸಿರುವ ಯೋಜನೆಗಳ ಕುರಿತು ನಬಾರ್ಡ್ ಎಜಿಎಂ ದಿವ್ಯ ರೈತರಿಗೆ ಮಾಹಿತಿ ನೀಡಿದರು. ಕೃಷಿ ಇಲಾಖೆಯ ಅಧಿಕಾರಿಗಳು, ವಿವಿಧ ಕೃಷಿ ವಿಶ್ವವಿದ್ಯಾಲಯಗಳ ಕೃಷಿ ತಜ್ಞರು ವಿಚಾರ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.
ಸಿರಿಧಾನ್ಯಗಳನ್ನು ಕೇವಲ ಅನಾರೋಗ್ಯಕ್ಕೆ ಒಳಗಾದವರಿಗೆ ಗಂಜಿ ಮಾಡಲು ಮಾತ್ರ ಸೇವಿಸಬೇಕೆಂಬ ತಪ್ಪು ಕಲ್ಪನೆ ಇದೆ. ಆದರೆ ಆರೋಗ್ಯವಂತರು ಅನ್ನ, ಚಪಾತಿ ಬದಲಿಗೆ ವಾರದ ಏಳು ದಿನದಲ್ಲಿ 6 ಬೇರೆ ಬೇರೆ ಸಿರಿಧಾನ್ಯದಿಂದ ತಯಾರಿಸಿದ ಆಹಾರ ಸೇವಿಸುವುದರಿಂದ ಆರೋಗ್ಯಕ್ಕೆ ಅನುಕೂಲವಾಗಲಿದೆ. - ಎಂ. ದಿನೇಶ್, ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ನಿರ್ದೇಶಕ
ಸಾಮಾನ್ಯವಾಗಿ ಜನರು ವಾರಾಂತ್ಯದಲ್ಲಿ ಹೆಚ್ಚಾಗಿ ಬರುತ್ತಾರೆ. ಆದರೆ ಶನಿವಾರವೇ ಮೇಳವನ್ನು ಮುಕ್ತಾಯ ಮಾಡಿದ್ದು ವ್ಯಾಪಾರಿಗಳಿಗೆ ನಷ್ಟ ಉಂಟಾಗಿದೆ. ಕಳೆದ ಬಾರಿಗಿಂತ ನಮಗೆ ವ್ಯಾಪಾರ ಕಡಿಮೆ ಆಗಿದೆ. ಮುಂದಿನ ಬಾರಿ ಮೇಳ ಆಯೋಜಿಸುವಾಗ ಭಾನುವಾರವನ್ನು ಪರಿಗಣಿಸಬೇಕು. -ಯೋಗೇಶ್, ಗ್ರಾಮೀಣ ಅಂಗಡಿ ವ್ಯಾಪಾರಿ