ಮಂಗಳೂರು: ಚಲಿಸುತ್ತಿದ್ದ ಖಾಸಗಿ ಬಸ್ಸಿನಲ್ಲಿ ವಿದ್ಯಾರ್ಥಿನಿಗೆ ಹಠಾತ್ ಎದೆನೋವು ಕಾಣಿಸಿಕೊಂಡಾಗ ಸಮಯ ಪ್ರಜ್ಞೆ ಮೆರೆದ ಬಸ್ಸಿನ ಚಾಲಕ- ನಿರ್ವಾಹಕರು ಕೂಡಲೆ ಬಸ್ಸನ್ನು ನೇರವಾಗಿ ಆಸ್ಪತ್ರೆಗೆ ಕರೆದೊಯ್ದು ಜೀವ ಉಳಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಮಂಗಳವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜಾಲತಾಣದಲ್ಲಿ ಬಹಳಷ್ಟು ಮಂದಿ ಈ ವಿಚಾರವನ್ನು ಶೇರ್ ಮಾಡಿಕೊಂಡಿದ್ದು, ಎಲ್ಲೆಡೆಯಿಂದ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.
13ಎಫ್ ನಂಬರಿನ ಕೃಷ್ಣ ಪ್ರಸಾದ್ ಎಂಬ ಬಸ್ಸು ಎಂದಿನಂತೆ ಕೂಳೂರು ಮಾರ್ಗವಾಗಿ ಮಂಗಳೂರು ನಗರಕ್ಕೆ ಸಂಚರಿಸುತ್ತಿತ್ತು. ದಾರಿ ಮಧ್ಯೆ ಬಸ್ಸಿನಲ್ಲಿದ್ದ ಕಾಲೇಜು ವಿದ್ಯಾರ್ಥಿನಿಗೆ ತೀವ್ರವಾದ ಎದೆನೋವು ಮತ್ತು ತಲೆನೋವು ಕಾಣಿಸಿಕೊಂಡಿದೆ. ಅದೇ ಕಾಲೇಜಿನ ಸುಮಾರು 10ರಷ್ಟು ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಬಸ್ಸಿನಲ್ಲಿದ್ದರು.
ವಿದ್ಯಾರ್ಥಿನಿ ಅಸ್ವಸ್ಥಗೊಂಡ ವಿಚಾರ ತಿಳಿದ ಬಸ್ಸಿನ ಚಾಲಕ ಗಜೇಂದ್ರ ಕುಂದರ್ ಹಾಗೂ ನಿರ್ವಾಹಕರಾದ ಸುರೇಶ್ ಮತ್ತು ಮಹೇಶ್ ಪೂಜಾರಿ ಅವರು ಬಸ್‌ನ್ನು ನೇರವಾಗಿ ಆಸ್ಪತ್ರೆಗೆ ಕೊಂಡೊಯ್ಯಲು ನಿರ್ಧರಿಸಿದರು. ಆಂಬ್ಯುಲೆನ್ಸ್‌ನಂತೆ ಹಾರನ್ ಬಾರಿಸುತ್ತ ವಾಹನ ದಟ್ಟಣೆಯ ನಡುವೆಯೂ 6 ಕಿ.ಮೀ. ದೂರವನ್ನು ಕೇವಲ ಆರು ನಿಮಿಷಗಳಲ್ಲಿ ಕ್ರಮಿಸಿ ನಗರದ ಕಂಕನಾಡಿಯಲ್ಲಿರುವ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆ ತಲುಪಿದರು.
ಆಸ್ಪತ್ರೆಯ ಪ್ರವೇಶ ದ್ವಾರದಲ್ಲಿ ಇರುವ ಭದ್ರತೆಯನ್ನು ಮೀರಿ, ಒಳಪ್ರವೇಶಿಸಲು ಅನುಮತಿಗೆ ಕಾಯದೆ ನೇರವಾಗಿ ಆಸ್ಪತ್ರೆಯ ತುರ್ತು ವಿಭಾಗಕ್ಕೆ ಬಸ್ಸನ್ನು ಕೊಂಡೊಯ್ದರು. ಬಳಿಕ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ.