ಜಿಲ್ಲೆ

ಬಲಿಷ್ಠ ಭಾರತದಿಂದ ಪಾಕಿಸ್ತಾನಕ್ಕೆ ತಕ್ಕ ಉತ್ತರ: ಭಾರತೀಯ ವಾಯುಸೇನೆಯ ಗ್ರೂಪ್ ಕ್ಯಾಪ್ಟನ್ (ನಿವೃತ್ತ) ಡಾ.ವಿನಯ್ ವಿಠಲ್

ಮೈಸೂರು:ಭಾರತವು ಶಕ್ತಿಂುುತ ರಾಷ್ಟ್ರವಾಗಿರುವುದರಿಂದ ಪಾಕಿಸ್ತಾನದ ಭಯೋತ್ಪಾದಕ ತಾಣಗಳನ್ನು ಪತ್ತೆ ಹಚ್ಚಿ ದಾಳಿ ಮಾಡಲು ಸಾಧ್ಯವಾಯಿತು ಎಂದು ಭಾರತೀಯ ವಾಯುಸೇನೆಯ ಗ್ರೂಪ್ ಕ್ಯಾಪ್ಟನ್ (ನಿವೃತ್ತ) ಡಾ.ವಿನಯ್ ವಿಠಲ್ ಹೇಳಿದರು.

ನಗರದ ದಿ ಇನ್ಸಿಟಿಟ್ಯೂಟ್ ಆಫ್ ಇಂಜಿನಿಯರ್ಸ್‌ನಿಂದ ಸಂಸ್ಥೆಯ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಅಪರೇಷನ್ ಸಿಂಧೂರದ ಅವಲೋಕನ ಎಂಬ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.

ಒಂದಲ್ಲ ಒಂದು ರೀತಿಯಲ್ಲಿ ಪಾಕಿಸ್ತಾನ ಸದಾ ಭಾರತದೊಂದಿಗೆ ತಗಾದೆ ತೆಗೆಯುತ್ತಲೇ ಬರುತ್ತಿದೆ. ಭಯೋತ್ಪಾದನೆ ಕೃತ್ಯದ ಮೂಲಕ ದೇಶದ ಶಾಂತಿಗೆ ಭಂಗ ತರಲು ಯತ್ನಿಸುತ್ತಿದೆ. ಆದರೆ, ಬಲಿಷ್ಠವಾಗಿರುವ ಭಾರತ ಅದಕ್ಕೆ ತಕ್ಕ ಉತ್ತರ ನೀಡುವ ಮೂಲಕ ಪಾಕಿಸ್ತಾನಕ್ಕೆ ಮುಖಭಂಗ ಉಂಟು ಮಾಡುತ್ತಿದೆ ಎಂದರು.

ಆಪರೇಷನ್ ಸಿಂಧೂರದ ಮೂಲಕ ಭಾರತವು ಭಯೋತ್ಪಾದಕರ ವಿರುದ್ಧದ ತನ್ನ ನಿಲುವನ್ನು ಪ್ರಪಂಚಕ್ಕೆ ತಿಳಿಸಿದೆ. ದೇಶದ ಬಲಿಷ್ಠ ಆರ್ಥಿಕತೆ, ವಿದೇಶಗಳೊಂದಿಗಿನ ಉತ್ತಮ ಸಂಬಂಧವು ಯುದ್ಧದ ಸಂದರ್ಭ ನೆರವಾಗಿದೆ. ಪಾಕಿಸ್ತಾನವು ಇದಕ್ಕೆ ವ್ಯತಿರಿಕ್ತವಾಗಿದ್ದು, ಅವರ ಆಡಳಿತವನ್ನು ಅಲ್ಲಿಯೇ ವಿರೋಧ ಪಕ್ಷವೇ ಟೀಕೆ ಮಾಡಿದೆ ಎಂದರು.

ಈಗ ಮುಕ್ತಾಯಗೊಂಡಿರುವ ಅಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆಯಲ್ಲಿ ಬಳಸಲಾದ ನಿರ್ದಿಷ್ಟ ಕ್ಷಿಪಣಿ ವ್ಯವಸ್ಥೆಗಳ ಅವಲೋಕನ ಈ ಸಮಯದಲ್ಲಿ ಅವಶ್ಯಕವಾಗಿದೆ. ದೇಶೀಯ ಆಸ್ತ್ರಗಳ ಬಗ್ಗೆ ಈಗ ಎಲ್ಲೆಡೆ ಚರ್ಚೆ ನಡೆಯುತ್ತಿದ್ದು, ಸಾಕಷ್ಟು ಬೇಡಿಕೆಯೂ ಬರುತ್ತಿದೆ ಎಂದರು.

ಭಾರತವು ಶಕ್ತಿಯುತ ರಾಷ್ಟ್ರವಾಗಿರುವುದರಿಂದ ಭಯೋತ್ಪಾದಕರ ತಾಣಗಳಿಗೆ ದಾಳಿ ಮಾಡಲು ಸಾಧ್ಯವಾಗಿದೆ. ಯುದ್ಧದ ಸಮಯದಲ್ಲಿ ತೆಗೆದುಕೊಂಡ ರಾಜಕೀಯ ನಿಲುವು, ಯುವ ಸಮುದಾಯದ ಉತ್ಸಾಹ, ಜನರಲ್ಲಿರುವ ರಾಷ್ಟ್ರೀಯತೆಯ ಭಾವನೆಗಳು ದೇಶದ ಧನಾತ್ಮಕ ಅಂಶಗಳಾಗಿವೆ ಎಂದು ಹೇಳಿದರು.

ಭಾರತದ ರಕ್ಷಣಾ ಇತಿಹಾಸದಲ್ಲಿ ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ ಒಂದು ಮೈಲಿಗಲ್ಲು. ಅದರ ದೋಷರಹಿತ ಕಾರ್ಯಗತಗೊಳಿಸುವಿಕೆ ಮತ್ತು ಅಗಾಧ ಯಶಸ್ಸಿನಿಂದ ಈ ಸೇನಾ ಕಾರ್ಯಾಚರಣೆ ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಟ್ಟಿದೆ. ಸೇನೆಯಲ್ಲಿರುವ ಅತ್ಯಾಧುನಿಕ ಯುದ್ಧ ಸಾಮಾಗ್ರಿಗಳು ದೇಶ ಬಲಿಷ್ಠವಾಗಿದೆ ಎಂಬುದನ್ನು ತೋರಿಸಿಕೊಟ್ಟಿದೆ ಎಂದರು.

ಹಿಂದಿನ ಯುದ್ಧ್ಧಗಳಿಗೆ ಹೋಲಿಸಿದರೆ ಈ ಬಾರಿ ಹೊಸ ಬೆಳವಣಿಗೆಗಳು, ತಂತ್ರಜ್ಞಾನ ಮುಂದುವರಿದಿರುವುದು ನಡೆದಿವೆ. ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಪ್ರವಾಸಿಗರನ್ನು ಗುರಿಯಾಗಿಸಿ ದಾಳಿ ಮಾಡಿದ ಬಳಿಕ ಕೇಂದ್ರ ಸರ್ಕಾರವು ವ್ಯಕ್ತಪಡಿಸಿದ ಬಲಿಷ್ಠ ರಾಜತಾಂತ್ರಿಕ ನಿಲುವುಗಳು ಪರಿಣಾಮಕಾರಿಯಾಗಿದ್ದವು. ಕಾರ್ಗಿಲ್ ಯುದ್ಧದ ಸಮಯದಲ್ಲೂ ಸಿಂಧೂ ನದಿ ವಿಚಾರದಲ್ಲಿ ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ. ಆದರೆ, ಈ ಬಾರಿ ಆ ಒಪ್ಪಂದ ಮುರಿದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿರುವುದು ದಿಟ್ಟ ನಿಲುವಾಗಿದೆ ಎಂದು ತಿಳಿಸಿದರು.

ಇಂಜಿನಿಯರುಗಳ ಸಂಸ್ಥೆ ಅಧ್ಯಕ್ಷ ಡಾ.ಆರ್.ದೀಪು, ಪದಾಧಿಕಾರಿಗಳಾದ ವಿ.ರವಿಂದ್ರನಾಥ್, ಬಿ.ಎಸ್.ಪ್ರಭಾಕರ್, ಡಾ.ಎಸ್.ಎ.ಮೋಹನ್‌ಕೃಷ್ಣ, ಸತೀಶ್ ಇದ್ದರು.