ಗುಂಡ್ಲುಪೇಟೆ: ವಿವೇಕಾನಂದರ ಜನ್ಮ ದಿನವನ್ನು ಯುವದಿನವನ್ನಾಗಿ ಆಚರಿಸುವ ಮೂಲಕ ಯುವಕರ ಶಕ್ತಿ ಸಾಮರ್ಥ್ಯವನ್ನು ಜಾಗೃತಗೊಳಿಸಲಾಗುತ್ತಿದೆ ಎಂದು ಹಿರಿಯ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಧೀಶ ಬಸವರಾಜ ತಳವಾರ್ ಹೇಳಿದರು.
ಶನಿವಾರ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ವಾಮಿ ವಿವೇಕಾನಂದರು ತಮ್ಮ 25ನೇ ವಯಸ್ಸಿನಲ್ಲಿ ಸನ್ಯಾಸತ್ವ ಸ್ವೀಕರಿಸಿದರು. ಸದೃಢ ದೇಶ ನಿರ್ಮಾಣಕ್ಕೆ ಯುವಕರ ಅಗತ್ಯದ ಬಗ್ಗೆ ಅರಿವಿದ್ದ ವಿವೇಕಾನಂದರು ಯುವ ಶಕ್ತಿಯ ಬಳಕೆ ಬಗ್ಗೆ ಅಪಾರ ವಿಶ್ವಾಸ ಹೊಂದಿದ್ದರು. ಯುವಕರು ಆತ್ಮಸ್ಥೈರ್ಯ ಹಾಗೂ ಇಚ್ಛಾಶಕ್ತಿಯಿಂದ ಕೆಲಸ ಮಾಡುವಂತಾಗಬೇಕು ಎಂದು ಭಾವಿಸಿದ್ದರು. ತಮಗೆ 100 ಸದೃಢ ಯುವಕರನ್ನು ನೀಡಿದರೆ ಬಲಿಷ್ಠ ದೇಶ ನಿರ್ಮಾಣ ಮಾಡುವುದಾಗಿ ಹೇಳಿದ್ದರು. 39 ವರ್ಷಗಳ ಅಲ್ಪಾವಧಿ ಜೀವನದಲ್ಲಿ ವಿವೇಕಾನಂದರು ಅಪಾರ ಸಾಧನೆ ಮಾಡಿದ್ದರು. ಮಕ್ಕಳಿಗೆ ಬಾಲ್ಯದಿಂದಲೇ ಬಲಿಷ್ಠ ದೇಶ ನಿರ್ಮಾಣದ ಬಗ್ಗೆ ಕನಸು ಮೂಡಿಸಬೇಕಾಗಿದೆ. ನನ್ನ ಜೀವನ ಹಾಗೂ ಬದುಕಿಗೆ ನಾನೇ ನಾಯಕ ಎಂದು ಭಾವಿಸುವ ಯುವ ಶಕ್ತಿಯಿಂದ ಮಾತ್ರ ಬಲಿಷ್ಠ ದೇಶ ನಿರ್ಮಾಣ ಹಾಗೂ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಹೇಳಿದರು.
ಪ್ರಧಾನ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಧೀಶ ಜೆ.ಜೆ.ಶಿವಕುಮಾರ್, ವಕೀಲರ ಸಂಘದ ಅಧ್ಯಕ್ಷ ಟಿ.ಎಸ್.ವೆಂಕಟೇಶ್ ಇತರರು ಇದ್ದರು.