ಮದ್ದೂರು: ನಿರಂತರವಾಗಿ ಯೋಗ ಮಾಡುವುದರಿಂದ ಸದೃಢ ದೇಹದಲ್ಲಿ ಸದೃಢ ಮನಸ್ಸು ಸದಾ ಹರ್ಷದಿಂದ ಕೂಡಿರುತ್ತದೆ ಎಂದು ನಳಂದ ವಿದ್ಯಾಪೀಠದ ಕಾರ್ಯದರ್ಶಿ ಡಾ.ಆರ್.ರಾಮಕೃಷ್ಣ ತಿಳಿಸಿದರು.
ಪಟ್ಟಣದ ನಳಂದ ವಿದ್ಯಾಪೀಠದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಯೋಗ ಗುರು ಮಲ್ಲಿಕಾರ್ಜುನಸ್ವಾಮಿ ಅವರ ಮಾರ್ಗದರ್ಶನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಚಿಕ್ಕ ವಯಸ್ಸಿನಿಂದಲ್ಲೇ ಯೋಗಾಭ್ಯಾಸ ಮಾಡುವುದರಿಂದ ಆರೋಗ್ಯ, ಮಾನಸಿಕ ಚುರುಕು, ಸ್ವಸ್ಥ ಮನಸ್ಸು ಉಂಟಾಗಿ ಜೀವನದಲ್ಲಿ ಯಾವುದೇ ರೀತಿಯ ಸಾಧನೆ ಮಾಡಲು ಸಹಕಾರಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ನಿರಂತರವಾಗಿ ಯೋಗ ಮಾಡುವುದರಿಂದ ಹಲವು ರೀತಿಯ ಪ್ರಯೋಜನಗಳು ಉಂಟಾಗುತ್ತದೆ ಎಂದರು.
ನಳಂದ ವಿದ್ಯಾಪೀಠದಲ್ಲಿ ನಿರಂತರವಾಗಿ ಯೋಗ ಶಿಬಿರಗಳು, ಪರಿಸರ ದಿನಾಚರಣೆ, ಮಕ್ಕಳ ಸಂತೆ, ಪ್ರತಿಭಾ ಕಾರಂಜಿ, ಸ್ಪರ್ಧಾತ್ಮಕ ಪರೀಕ್ಷೆಗಳು, ವಸ್ತು ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಹಲವಾರು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕಗಳಿಗೂ ಹೆಚ್ಚಿನ ಆದ್ಯತೆ ನೀಡುವ ಮೂಲಕ ಮಕ್ಕಳಿಗೆ ಉತ್ತಮ ಪರಿಸರದಲ್ಲಿ ಗುಣಾತ್ಮಕ ಶಿಕ್ಷಣ ನೀಡುತ್ತಾ ಬರುತ್ತಿರುವುದು ಸಂಸ್ಥೆಯ ಹೆಗ್ಗಳಿಕೆಯಾಗಿದೆ ಎಂದು ಮೆಚ್ಚುಗೆ ಸೂಚಿಸಿದರು.
ಯೋಗ ಶಿಬಿರದಲ್ಲಿ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡು ಸೂರ್ಯ ನಮಸ್ಕಾರ, ಅರ್ಧ ಚಕ್ರಾಸನ, ಚಕ್ರಾಸನ, ಧನುರಾಸನ ಸೇರಿದಂತೆ ವಿವಿಧ ಆಸನಗಳನ್ನು ಮಾಡುವ ಮೂಲಕ ಶಿಕ್ಷಕರ ಗಮನ ಸೆಳೆದರು. ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕ ಮಲ್ಲಿಕಾರ್ಜುನ ಅವರನ್ನು ವಿದ್ಯಾಸಂಸ್ಥೆ ವತಿಯಿಂದ ಅಭಿನಂದಿಸಲಾಯಿತು. ಸಂಸ್ಥೆಯ ಧರ್ಮದರ್ಶಿ ಎ.ಸಿ.ಸವಿತಾ ರಾಮಕೃಷ್ಣ, ಪ್ರಾಂಶುಪಾಲ ಚಂದ್ರಶೇಖರ್, ಮುಖ್ಯ ಶಿಕ್ಷಕಿ ಸುಕನ್ಯಾ ಇತರರು ಇದ್ದರು.