ಸಿದ್ದಾಪುರ: ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮತ್ತು ಆಡಳಿತದಲ್ಲಿನ ಲೋಪದೋಷಗಳನ್ನು ಬಿಂಬಿಸುವಲ್ಲಿ ಬೀದಿ ನಾಟಕಗಳು ಮಹತ್ವದ ಪಾತ್ರ ನಿರ್ವಹಿಸುತ್ತವೆ ಎಂದು ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಜಿ. ನಾಗರಾಜ ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ರಾಜ್ಯ ಬೀದಿ ನಾಟಕ ಕಲಾತಂಡಗಳ ಒಕ್ಕೂಟ, ಉತ್ತರ ಕನ್ನಡ ಜಿಲ್ಲಾ ಘಟಕದ ಸಹಕಾರದೊಂದಿಗೆ ಬುಧವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಬೀದಿ ನಾಟಕೋತ್ಸವ ಮತ್ತು ಜಿಲ್ಲಾ ಮಟ್ಟದ ಬೀದಿ ರಂಗ ಪುರಸ್ಕಾರ-2024 ಜಾನಪದ ಸಂಗೀತ ಮತ್ತು ನಾಟಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಾಮಾಜಿಕ ಹೋರಾಟಗಾರ ವಸಂತ ನಾಯ್ಕ ಮಾತನಾಡಿ, ಜನಜಾಗೃತಿ ಅರಿವು ಮೂಡಿಸುವ ಕೆಲಸ ಬೀದಿ ನಾಟಕ ತಂಡಗಳಿಂದ ಆಗುತ್ತಿದೆ. ಸರ್ಕಾರ ಕಲಾವಿದರಿಗೆ ಆದ್ಯತೆ ಹಾಗೂ ವೇತನ ನೀಡಬೇಕು. ಈ ಕುರಿತು ಸರ್ಕಾರದ ಗಮನಕ್ಕೆ ತರುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಬೀದಿ ರಂಗ ಪುರಸ್ಕಾರ: ಇದೇ ಸಂದರ್ಭದಲ್ಲಿ ಅಂಕೋಲಾ ಆವರ್ಸಾದ ಗಜಾನನ ಉದ್ದಂಡ ಅಂಬಿಗ, ಸಿದ್ದಾಪುರ ಕಡಕೇರಿಯ ವಾಸು ಮಡಿವಾಳ, ಕಾರವಾರ ಅಮದಳ್ಳಿಯ ರಾಜೇಶ ವಿಠ್ಠಲ ಮಡಿವಾಳ, ಹಳಿಯಾದ ಗಾಡಿಗೇರ ವಸಂತಿ ಸಂತಾನ ಗೋದ್ಲೇಕರ್, ಕಾರವಾರ ಅಮದಳ್ಳಿಯ ಉಲ್ಲಾಸ ದೇವರಾಯ ಗೌಡ, ಅಂಕೋಲಾದ ಮಂಜುನಾಥ ಗೋಪಾಲ ಅಗೇರಾ ಅವರಿಗೆ ಜಿಲ್ಲಾ ಮಟ್ಟದ ಬೀದಿ ರಂಗ ಪುರಸ್ಕಾರ ನೀಡಿ ಗೌರವಿಸಲಾಯಿತು.
ಬೇಡ್ಕಣಿ ಕೋಟೆ ಹನುಮಂತ ದೇವಾಲಯದ ಅಧ್ಯಕ್ಷ ವಿ.ಎನ್. ನಾಯ್ಕ ಬೇಡ್ಕಣಿ, ತಾಪಂ ಇಒ ದೇವರಾಜ ಹಿತ್ತಲಕೊಪ್ಪ, ರಾಜ್ಯ ಬೀದಿನಾಟಕ ಕಲಾ ತಂಡದ ಒಕ್ಕೂಟ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ಕೃಷ್ಣ ಮುದ್ಗೇಕರ್, ತಾಪಂ ಮಾಜಿ ಅಧ್ಯಕ್ಷ ಸಿ.ಆರ್. ನಾಯ್ಕ, ರೈತ ಮುಖಂಡ ವೀರಭದ್ರ ನಾಯ್ಕ ಇತರರಿದ್ದರು. ಪುರುಷೋತ್ತಮ ಗೌಡ ಪ್ರಾಸ್ತಾವಿಕ ಮಾತನಾಡಿದರು. ಗಂಗಾಧರ ಮಡಿವಾಳ ಸ್ವಾಗತಿಸಿದರು. ಸುರೇಶ ಕಡಕೇರಿ ನಿರ್ವಹಿಸಿದರು. ಕೆ.ರಮೇಶ ವಂದಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಆರು ಕಲಾತಂಡಗಳು ಏಡ್ಸ್ ಜಾಗೃತಿ, ಸಮಾಜ ಕಲ್ಯಾಣ ಇಲಾಖೆ ಸೌಲಭ್ಯ, ಕೃಷಿ ಇಲಾಖೆ ಸೌಲಭ್ಯಗಳ ಕುರಿತು ತಾಲೂಕಿನ ವಿವಿಧ ಕಾಲೇಜ್ ಹಾಗೂ ಪ್ರೌಢಶಾಲೆಗಳಲ್ಲಿ ಜಾಗೃತಿ ಕಾರ್ಯಕ್ರಮ ನೀಡಿದರು.