ಮಂಡ್ಯ: ನಗರದ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ(ಮಿಮ್ಸ್) ಮಂಗಳವಾರ ರಾತ್ರಿ ವಿಚಿತ್ರ ಹೆಣ್ಣು ಶಿಶು ಜನಿಸಿದೆ. ಒಣ ಚರ್ಮ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿರುವ ಮಗುವಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರಾಮನಗರ ಮೂಲದ ದಂಪತಿಯ ಮೊದಲ ಮಗು ಇದಾಗಿದೆ. ಮಹಿಳೆಯನ್ನು ಹೆರಿಗೆಗಾಗಿ ಮಿಮ್ಸ್‌ಗೆ ದಾಖಲು ಮಾಡಲಾಗಿತ್ತು. ಡಾ.ಗೀತಾ ಹೆರಿಗೆ ಮಾಡಿಸಿದಾಗ ವಿಚಿತ್ರ ಮಗುವಿನ ಜನನವಾಗಿದೆ.
ಮಗುವಿನ ದೇಹದ ಚರ್ಮ ತೀರ ದಪ್ಪವಾಗಿದ್ದು, ಒಣಗಿದಂತಿದೆ. ಇದರಿಂದಾಗಿ ಅಲ್ಲಲ್ಲಿ ಚರ್ಮ ಬಿರುಕು ಬಿಟ್ಟಿದೆ. ಹೀಗಾಗಿ ಮೈಮೇಲೆ ರಕ್ತ ಚೆಲ್ಲಿದಂತೆ ಕಾಣುತ್ತಿದ್ದು, ಪಾಲಕರ ಆತಂಕಕ್ಕೆ ಕಾರಣವಾಗಿದೆ. ಅಸ್ವಸ್ಥಗೊಂಡಂತಿರುವ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಅನುವಂಶೀಯತೆಯಿಂದಾಗಿ ಮಗು ಈ ರೀತಿ ಜನಿಸಿರಬಹುದು. ಎಬಿಸಿಎ 12 ಜೀನ್ ಮ್ಯುಟೇಶನ್ ಕಾರಣದಿಂದ ಈ ರೀತಿ ಆದ ವಿಚಿತ್ರ ಒಣಚರ್ಮ ಕಾಯಿಲೆಗೆ ಒಳಗಾಗಿರಬಹುದು. ಮಗು ಸರಿಯಾಗಬೇಕಾದರೆ ಲಕ್ಷಾಂತರ ರೂ. ಖರ್ಚು ಮಾಡಿ ಚಿಕಿತ್ಸೆ ಕೊಡಿಸಬೇಕಿದೆ ಎಂದು ವೈದ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.