ಜಿಲ್ಲೆ

ಗಬ್ಬು ನಾರುತ್ತಿದ್ದ ಚರಂಡಿ ಈಗ ವಿಹಾರ ತಾಣ:ಕೋರಮಂಗಲದಲ್ಲಿ ಪಾಲಿಕೆಯಿಂದ ಅಭಿವೃದ್ಧಿ

ಬೆಂಗಳೂರು:ಗಬ್ಬು ನಾರುತ್ತಿದ್ದ ಮಳೆನೀರು ಕಾಲುವೆಯನ್ನು ಸುಂದರ ಉದ್ಯಾನವನ್ನಾಗಿ ಅಭಿವೃದ್ಧಿಪಡಿಸಲಾಗಿದ್ದು, ಪ್ರತಿ ನಿತ್ಯ ನೂರಾರು ವಾಯುವಿಹಾರಿಗಳು ಬಳಸುತ್ತಿದ್ದಾರೆ.

ಕೋರಮಂಗಲದ ರಾಜಕಾಲುವೆ (ಕೆ-100), ಕೆಂಪೇಗೌಡ ಬಸ್​ ನಿಲ್ದಾಣದ ಶಾಂತಲಾ ಸಿಲ್ಕ್​ನಿಂದ ಪ್ರಾರಂಭವಾಗುವ 12 ಕಿ.ಮೀ. ಉದ್ದದ ಮಳೆ ನೀರು ಚರಂಡಿಯಾಗಿದೆ. ಶಾಂತಿನಗರ, ಕೋರಮಂಗಲ ಮೂಲಕ ಹಾದುಹೋಗಿ ಅಂತಿಮವಾಗಿ ಬೆಳ್ಳಂದೂರು ಕೆರೆಗೆ ಸೇರುತ್ತದೆ. ಹಲವು ದಶಕಗಳಿಂದ ರಾಜಕಾಲುವೆಯಲ್ಲಿ ಕೊಳಚೆ ನೀರು, ಕಸದಿಂದ ಹೆಚ್ಚು ಕಲುಷಿತವಾಗಿತ್ತು. ಇದನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಿಯೋಲ್​ನ ಚಿಯೋಂಗ್​ ಗಿಚಿಯಾನ್​ ಯೋಜನೆಯಿಂದ ಪ್ರೇರಣೆ ಪಡೆದ ಬಿಬಿಎಂಪಿ, 2021ರಲ್ಲಿ 179 ಕೋಟಿ ರೂ. ವೆಚ್ಚದಲ್ಲಿ ಕೆ-100 ಯೋಜನೆಯಡಿ ಅಭಿವೃದ್ಧಿ ಕೈಗೊಂಡಿತ್ತು. ಇದರಡಿ ಕೋರಮಂಗಲ ಕಣಿವೆ ಭಾಗವಾಗಿ ಕೆ.ಆರ್​. ಮಾರುಕಟ್ಟೆಯಿಂದ ಬೆಳ್ಳಂದೂರು ಕೆರೆವರೆಗಿನ 9.2 ಕಿ.ಮೀ. ಉದ್ದದ ರಾಜಕಾಲುವೆಯನ್ನು ಜಲಮಾರ್ಗವಾಗಿ ಅಭಿವೃದ್ಧಿಪಡಿಸಲಾಗಿದೆ. ಕಲುಷಿತಗೊಂಡಿರುವ ರಾಜಕಾಲುವೆ ತಳಭಾಗವನ್ನು ಪೂರ್ಣವಾಗಿ ಸ್ವಚ್ಛಗೊಳಿಸಿ ನೀರು ಇಂಗುವಂತೆ ಅಭಿವೃದ್ಧಿಗೊಳಿಸಲಾಗುತ್ತದೆ.

ರಾಜಕಾಲುವೆಯ ಎರಡೂ ಬದಿಯ ತಡೆಗೋಡೆ, ತಳಮಟ್ಟದ ಸೇತುವೆಗಳನ್ನು ವಾಸ್ತುಶಿಲ್ಪದ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗುತ್ತದೆ. ಮಾರ್ಗದುದ್ದಕ್ಕೂ ಅಲ್ಲಲ್ಲಿ ನಾಗರಿಕರಿಗಾಗಿ ವಿಹಾರ ತಾಣ ನಿರ್ಮಿಸಲಾಗುತ್ತಿದೆ. ರಾತ್ರಿ ವೇಳೆ ಉದ್ಯಾನದ ರೀತಿಯಲ್ಲಿ ವಿದ್ಯುದ್ದೀಕರಣ ಅಳವಡಿಸಲಾಗುತ್ತಿದೆ. ಪಾದಚಾರಿ ಮಾರ್ಗ, ರಾಜಕಾಲುವೆಯ ಒಂದು ಕಡೆಯಿಂದ ಇನ್ನೊಂದು ಕಡೆಗೆ ಬ್ರಿಡ್ಜ್​ ನಿರ್ಮಿಸುವುದು, ಗಿಡ ನಡೆವುದು, ಒಳಚರಂಡಿಯಲ್ಲಿ ಹರಿಯುತ್ತಿರುವ ಕೊಳಚೆ ನೀರು ಕಡಿಮೆ ಮಾಡುವುದು, ಒಳಚರಂಡಿ ನೀರನ್ನು ಸಂಸ್ಕರಿಸುವುದು, ಶುದ್ಧ ನೀರು ಸುಗಮವಾಗಿ ಹಾದು ಹೋಗುವ ವ್ಯವಸ್ಥೆ ಸೇರಿ ಇತರೆ ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ. ಅದರಂತೆ, ಯೋಜನೆಯಡಿ ಕೋರಮಂಗಲದಲ್ಲಿ ಮಳೆ ನೀರು ಚರಂಡಿಯನ್ನು ಹಸಿರು ಉದ್ಯಾನವನ್ನಾಗಿ ನಿರ್ಮಿಸಲಾಗಿದೆ. ಉದ್ಯಾನವನ್ನು ಸಾರ್ವಜನಿಕರಿಗೆ ಮುಕ್ತವಾಗಿಲ್ಲದಿದ್ದರೂ ಮೂಲಸೌಕರ್ಯದಿಂದ ಜನರು ಬಳಸುತ್ತಿದ್ದಾರೆ. ಯೋಜನೆಯನ್ನು ಮೂರು ಹಂತಗಳಾಗಿ ವಿಂಗಡಿಸಲಾಗಿದೆ. ಮೊದಲ 2 ಹಂತಗಳು ಬಹುತೇಕ ಪೂರ್ಣಗೊಂಡಿದೆ. 3ನೇ ಹಂತದ ಕೆಲಸ ಪ್ರಗತಿಯಲ್ಲಿದೆ. ಮಳೆನೀರು ಚರಂಡಿಗೆ ಹರಿಯದಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಸಂಪೂರ್ಣ ಕಾಮಗಾರಿ ಪೂರ್ಣಗೊಂಡ ಬಳಿಕವೇ ಸಾರ್ವಜನಿಕರ ಬಳಕೆಗೆ ಮಕ್ತವಾಗಲಿದೆ.

ಹಸಿರು ಕಾರಿಡಾರ್​​​: ಕಲುಷಿತ ಚರಂಡಿಯನ್ನು ಹಲವು ಸಸ್ಯಗಳಿಂದ ಹಸಿರು ಕಾರಿಡಾರ್​ ಆಗಿ ನಿರ್ಮಿಸುವುದರಿಂದ ವಾಯುಮಾಲಿನ್ಯ ಮಟ್ಟ ತಗ್ಗಿದೆ. ಉದ್ಯಾನದ ಸುತ್ತಮುತ್ತ ನಿವಾಸಿಗಳಿಗೆ ಶುದ್ಧ ಗಾಳಿ ಸಿಗುವುದರಿಂದ ಆರೋಗ್ಯ ಮಟ್ಟವೂ ಸುಧಾರಿಸಲಿದೆ. ನಡಿಗೆ, ಸೈಕಲ್​ ಪಥದಿಂದ ದೈಹಿಕ ಚಟುವಟಿಕೆಗಳಿಗೆ ಅನುಕೂಲವಾಗಿದೆ. ಬೊಜ್ಜು, ಮಧುಮೇಹ, ಹೃದಯ, ರಕ್ತನಾಳ ಸಮಸ್ಯೆಗಳಿಂದ ಪಾರಾಗಬಹುದು. ನೀರು ನಿಲ್ಲದಂತೆ ವ್ಯವಸ್ಥೆ ರೂಪಿಸುವುದರಿಂದ ಡೆಂಘೆ, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳು ಹರಡುವುದಿಲ್ಲ ಎಂದು ಎನ್ನುತ್ತಾರೆ ವೈದ್ಯರು.

ನಿವಾಸಿಗಳ ಹರ್ಷ:ಚರಂಡಿ ಸಮೀಪ ನಮ್ಮ ಮನೆ ಇದೆ. 10 ವರ್ಷಗಳಿಂದ ಇಲ್ಲೇ ವಾಸಿಸುತ್ತಿದ್ದೇನೆ. ಚರಂಡಿ ದುರ್ನಾತದಿಂದ ಮನೆಯಲ್ಲಿ ವಾಸಿಸುವುದಕ್ಕೆ ಆಗುತ್ತಿರಲಿಲ್ಲ. ಬೇಸಿಗೆಯಲ್ಲಂತೂ ಈ ಸಮಸ್ಯೆ ಇನ್ನಷ್ಟು ವಿಪರೀತವಾಗಿತ್ತು. ಈಗ ಅಭಿವೃದ್ಧಿಗೊಳಿಸಿದ ಪರಿಣಾಮ ವಾಸನೆ ಕಡಿಮೆಯಾಗಿದೆ ಎನ್ನುತ್ತಾರೆ ನಿವಾಸಿ ಶಾಂತಮ್ಮ. ಪ್ಲಾಸ್ಟಿಕ್​ ಬಾಟಲ್​, ಕಸದಿಂದ ತುಂಬಿದ್ದ ಮಳೆನೀರು ಚರಂಡಿಯಲ್ಲಿ ಸುಂದರವಾದ ಉದ್ಯಾನವಾಗಿ ನಿರ್ಮಿಸುವುದರಿಂದ ನಮ್ಮಂತಹ ನೂರಾರು ವಾಯುವಿಹಾರಿಗಳಿಗೆ ಅನುಕೂಲವಾಗಿದೆ. ಸಸಿ, ಹೂವಿನ ಗಿಡಗಳು ನೋಡಲು ಚೆಂದ ಎನ್ನುತ್ತಾರೆ ವಾಯುವಿಹಾರಿ ಲಿಯೋ. ಹೊಸ ಉದ್ಯಾನ ಕಂಡು ಇಲ್ಲಿನ ಸುತ್ತಮುತ್ತ ನಿವಾಸಿಗಳು ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ರಾತ್ರಿ ವೇಳೆ ಕೆಲವರು ಕಸ ಎಸೆಯುತ್ತಿರುವುದು ಕಂಡುಬಂದಿದೆ. ಹಾಗಾಗಿ, ಕಸ ಎಸೆಯದಂತೆ ತಡೆಯುವುದು ಸೇರಿ ಸಮರ್ಪಕವಾಗಿ ನಿರ್ವಹಣೆ ಮಾಡಿದರೆ ಉದ್ಯಾನ ಹಾಳಾಗುವುದನ್ನು ತಡೆಯಬಹುದು.