ಜಿಲ್ಲೆ

ಶಿರವಾಡದಲ್ಲಿ ಸ್ಟೇಡಿಯಂ ಪ್ರಸ್ತಾವ ನನೆಗುದಿಗೆ

ಬಸವರಾಜ ವೀರಪ್ಪ ಗರಗ

ಕಾರವಾರ: ಉತ್ತರ ಕನ್ನಡ ಜಿಲ್ಲಾ ಕೇಂದ್ರ ಕಾರವಾರದಲ್ಲಿ ಜಿಲ್ಲಾ ಕ್ರೀಡಾಂಗಣ ಹೊಂದುವ ಕನಸಿನಲ್ಲಿ ಶಿರವಾಡದಲ್ಲಿ ಅರಣ್ಯ ಭೂಮಿ ಪಡೆಯಲು ಸಲ್ಲಿಕೆಯಾಗಿದ್ದ ಪ್ರಸ್ತಾವನೆಯು ಅಂತಿಮ ಹಂತಕ್ಕೆ ಬಂದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ನನೆಗುದಿಗೆ ಬಿದ್ದಿದೆ.

ಶಿರವಾಡದ ಸರ್ವೆ ನಂಬರ್ ‘17ಅ’ ರಲ್ಲಿ ಸುಮಾರು 5 ಹೆಕ್ಟೇರ್ ಅರಣ್ಯ ಜಮೀನನ್ನು ಜಿಲ್ಲಾ ಕ್ರೀಡಾಂಗಣಕ್ಕಾಗಿ ನಿರ್ವಿುಸಲು ಗುರುತಿಸಲಾಗಿತ್ತು. ಜಮೀನನ್ನು ತಮಗೆ ಹಸ್ತಾಂತರಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ 2015ರಲ್ಲಿ ಕೇಂದ್ರ ಅರಣ್ಯ ಮಂತ್ರಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ಪರಿಶೀಲನೆಗೊಂಡು ಪರ್ಯಾಯ ಅರಣ್ಯೀಕರಣಕ್ಕಾಗಿ ಕಂದಾಯ ಭೂಮಿ ಗುರುತಿಸಿ, 1.31 ಕೋಟಿ ರೂ. ಪರಿಹಾರಾತ್ಮಕ ಮೊತ್ತ ಪಾವತಿಸಿದಲ್ಲಿ ಅರಣ್ಯ ಭೂಮಿ ಹಸ್ತಾಂತರಿಸುವ ಮುಂದಿನ ಪ್ರಕ್ರಿಯೆ ನಡೆಸುವುದಾಗಿ ಅರಣ್ಯ ಮಂತ್ರಾಲಯವು 2021ರಲ್ಲಿ ಜಿಲ್ಲಾ ಯುವ ಸಬಲೀಕರಣ ಇಲಾಖೆಗೆ ತಿಳಿಸಿತ್ತು.

ಅದರಂತೆ ಆಗಿನ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಕದ್ರಾದಲ್ಲಿ ಪರ್ಯಾಯ ಅರಣ್ಯೀಕರಣಕ್ಕೆ ಭೂಮಿ ಗುರುತಿಸಿ, ಅರಣ್ಯದ ನೆಟ್ ಪ್ರೆಸೆಂಟ್ ವ್ಯಾಲ್ಯೂ(ಎನ್​ವಿಪಿ) 52.15 ಲಕ್ಷ ರೂ. ಹಾಗೂ ಕಾಂಪೆನ್ಸೇಟ್ರಿ ಅಫಾರೆಸ್ಟೇಶನ್ ಶುಲ್ಕ 79.65 ಲಕ್ಷ ರೂ. ಸೇರಿ 1.31 ಕೋಟಿ ರೂ. ಪಾವತಿಸುವಂತೆ ಯುವ ಸಬಲೀಕರಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದರು. ಆದರೆ, ಮುಂದೆ ಅದನ್ನು ಫಾಲೋ ಅಪ್ ಮಾಡಿ ಹಣ ತುಂಬುವ ಕಾರ್ಯವಾಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರೂ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.

ಸೌಕರ್ಯವಿಲ್ಲದೆ ಪರದಾಟ

ಕಾರವಾರ ಜಿಲ್ಲಾ ಕೇಂದ್ರವಾಗಿದ್ದರೂ ಕ್ರೀಡಾ ಚಟುವಟಿಕೆ ನಡೆಸಲು ಜಿಲ್ಲಾ ಕ್ರೀಡಾಂಗಣ ಇಲ್ಲ. ಶಿರಸಿಯ ಮಾರಿಕಾಂಬಾ ಕ್ರೀಡಾಂಗಣವನ್ನು ಜಿಲ್ಲಾ ಕ್ರೀಡಾಂಗಣ ಎಂದು ಪರಿಗಣಿಸಲಾಗುತ್ತಿದೆ. ಸದ್ಯ ಕಾರವಾರದಲ್ಲಿರುವ ಮಾಲಾದೇವಿ ಮೈದಾನ ಮೂಲ ಸೌಕರ್ಯದಿಂದ ವಂಚಿತವಾಗಿದೆ. ಶೌಚಗೃಹ, ಮಹಿಳಾ ಕೊಠಡಿಗಳು, ವಿಶ್ರಾಂತಿ ಕೊಠಡಿ ಮುಂತಾದ ಸೌಲಭ್ಯಗಳನ್ನು ಕಲ್ಪಿಸುವ ಸಂಬಂಧ ಪ್ರಾರಂಭವಾದ ಕಾಮಗಾರಿ ಕುಂಟುತ್ತ ಸಾಗಿದೆ. ಕಾಂಪೌಂಡ್ ಕಾಮಗಾರಿಯೂ ಅರ್ಧಕ್ಕೇ ನಿಂತಿದೆ. ಇಲ್ಲಿ ಸದ್ಯ 400 ಮೀಟರ್ ಟ್ರ್ಯಾಕ್, ಸಿಂಥೆಟಿಕ್ ಟ್ರ್ಯಾಕ್ ಕೂಡ ಇಲ್ಲ. ರಾಜ್ಯಮಟ್ಟದ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಲೂ ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಸ್ಥಳೀಯ ಕ್ರೀಡಾ ಪ್ರತಿಭೆಗಳಿಗೆ ಅನ್ಯಾಯವಾಗುತ್ತಿದೆ.

ಶಿರವಾಡದಲ್ಲಿ ಜಿಲ್ಲಾ ಕ್ರೀಡಾಂಗಣ ನಿರ್ವಣಕ್ಕಾಗಿ ಗುರುತಿಸಿದ ಜಮೀನು ಅತ್ಯಂತ ಪ್ರಶಸ್ತವಾಗಿದೆ. ರೈಲ್ವೆ ನಿಲ್ದಾಣದಿಂದ ಕೇವಲ 1 ಕಿಮೀ ದೂರದಲ್ಲಿದ್ದು, ರಾಷ್ಟ್ರ ಮಟ್ಟದ ಕ್ರೀಡಾ ಸ್ಪರ್ಧೆಗಳನ್ನು ನಡೆಸಲು ಅನುಕೂಲಕರವಾಗಿದೆ. ಒಮ್ಮೆ ಜಮೀನು ಯುವ ಸಬಲೀಕರಣ ಇಲಾಖೆಗೆ ಹಸ್ತಾಂತರವಾದರೆ ಕೇಂದ್ರ ಸರ್ಕಾರದ ಖೇಲೋ ಇಂಡಿಯಾ ಅಡಿ ಕ್ರೀಡಾಂಗಣ ಅಭಿವೃದ್ಧಿಗೆ ಸಾಕಷ್ಟು ಅನುದಾನ ಸಿಗಲಿದೆ. | ಸದಾನಂದ ನಾಯಕ ಅಧ್ಯಕ್ಷ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಶನ್
ಜಿಲ್ಲಾ ಕ್ರೀಡಾಂಗಣ ನಿರ್ವಣಕ್ಕೆ ಅರಣ್ಯ ಜಮೀನು ಕೋರಿ ಅರಣ್ಯ ಮಂತ್ರಾಲಯಕ್ಕೆ ಸಲ್ಲಿಕೆಯಾದ ಅರ್ಜಿ ತಿರಸ್ಕಾರವಾದಂತಿದೆ. ಆ ಬಗ್ಗೆ ಕಡತ ಪರಿಶೀಲಿಸಿ, ಅರಣ್ಯಾಧಿಕಾರಿಗಳ ಸಲಹೆ ಪಡೆದು, ಮರು ಪ್ರಸ್ತಾವನೆ ಸಲ್ಲಿಸುವ ಕಾರ್ಯ ಮಾಡಲಾಗುವುದು. | ರವಿ ನಾಯ್ಕ ಜಿಲ್ಲಾ ಯುವ ಸಬಲೀಕರಣ ಅಧಿಕಾರಿ