ಬೆಂಗಳೂರು: ತುಮಕೂರು ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡರು ಕಾಂಗ್ರೆಸ್ಗೆ ಗುಡ್ ಬೈ ಹೇಳಿದ್ದು, ಮುಂಬರುವ ವಿಧಾನಸಭಾ ಚುನಾವಣೆಗೆ ಕುಣಿಗಲ್ ಕ್ಷೇತ್ರದಿಂದ ಸ್ಪರ್ಧಿಸೋದು ಖಚಿತ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಆದರೆ, ಯಾವ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರೆ ಗೊತ್ತಾ?
ಕಳೆದ ಲೋಕಸಭಾ ಚುನಾವಣೆಯಲ್ಲಿ ಮುದ್ದಹನುಮೇಗೌಡರಿಗೆ ಕೊನೇ ಕ್ಷಣದಲ್ಲಿ ಕಾಂಗ್ರೆಸ್ನಿಂದ ಟಿಕೆಟ್ ಕೈತಪ್ಪಿತ್ತು. ಇದಕ್ಕೆ ಕಾರಣ ಡಿಕೆ ಬ್ರದರ್ಸ್ ಕಾರಣ ಎಂದು ಪರೋಕ್ಷವಾಗಿ ಆಕ್ರೋಶವನ್ನೂ ಹೊರಹಾಕಿದ್ದರು. ಅಲ್ಲದೆ, ಕುಣಿಗಲ್ ವಿಧಾನಸಭಾ ಕ್ಷೇತ್ರ ಚುನಾವಣೆಗೆ ಕಾಂಗ್ರೆಸ್ನಿಂದ ಟಿಕೆಟ್ ಬಯಸಿದ್ದರಾದರೂ ಸಿಗುವ ಭರವಸೆ ಬರಲೇ ಇಲ್ಲ. ಇದರಿಂದ ಬೇಸತ್ತ ಎಸ್ಪಿಎಂ, ಇಂದು(ಗುರುವಾರ) ಬೆಳಗ್ಗೆ ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್ಪಿಎಂ, 2023ರ ವಿಧಾನಸಭಾ ಚುನಾವಣೆಯಲ್ಲಿ ನಾನು ಕುಣಿಗಲ್ ಕ್ಷೇತ್ರದ ಅಭ್ಯರ್ಥಿ ಆಗುವುದು ಖಚಿತ ಎನ್ನುತ್ತಲೇ ಇಂದು ಸಂಜೆಯೊಳಗೆ ಕಾಂಗ್ರೆಸ್ಗೆ ರಾಜೀನಾಮೆ ಪತ್ರ ಕೊಡುವೆ ಎಂದು ಘೋಷಿಸಿದರು.
ಆದರೆ ಯಾವ ಪಕ್ಷ ಸೇರುವೆ ಎಂಬ ಗುಟ್ಟನ್ನು ಬಿಟ್ಟುಕೊಡಲಿಲ್ಲವಾದರೂ ಬಿಜೆಪಿ ಪಕ್ಷವನ್ನೇ ಸೇರುವ ಸಾಧ್ಯತೆ ಇದೆ. ವಿಜಯವಾಣಿ ಜತೆ ಮಾತನಾಡಿದ ಎಸ್ಪಿಎಂ, ಶೀಘ್ರವೇ ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಅಂತಿಮ ನಿರ್ಧಾರ ಪ್ರಕಟಿಸುವೆ. ಮಹಾಲಯ ಅಮಾವಸ್ಯೆ(ಪಿತೃಪಕ್ಷ)ಗೂ ಮುನ್ನವೇ ಈ ಕೆಲಸ ಆಗುತ್ತೆ. ಯಾವುದೇ ಕಾರಣಕ್ಕೂ ತಡ ಮಾಡಲ್ಲ. ನನ್ನ ಕ್ಷೇತ್ರದ ಜನರೊಂದಿಗೆ ಚರ್ಚಿಸಿ ಅವರ ಅಭಿಪ್ರಾಯ ಪಡೆದು ಮುಂದುವರಿಯುವೆ ಎಂದರು. ಆಮ್ ಆದ್ಮಿ ಪಾರ್ಟಿಗೆ ಸೇರುತ್ತೀರಾ? ಎಂಬ ಪ್ರಶ್ನೆಗೆ ನಕ್ಕ ಎಸ್ಪಿಎಂ, ಶೀಘ್ರವೇ ಎಲ್ಲಕ್ಕೂ ತೆರೆಬೀಳಲಿದೆ ಎಂದಷ್ಟೇ ಹೇಳಿದರು.
ಕುಣಿಗಲ್ ಕ್ಷೇತ್ರದಲ್ಲಿ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ನಡುವೆಯೇ ಜಿದ್ದಾಜಿದ್ದಿನ ಸ್ಪರ್ಧೆ ಇರೋದು. ಮೂರು ಪಕ್ಷದಲ್ಲೂ ಒಕ್ಕಲಿಗ ನಾಯಕರೇ ಇದ್ದು, ತ್ರಿಕೋನ ಸ್ಪರ್ಧೆ ಏರ್ಪಡುತ್ತಲೇ ಇರುತ್ತೆ. ಆದರೆ ಇದುವರೆಗೂ ಬಿಜೆಪಿಯಿಂದ ಯಾರೊಬ್ಬರೂ ಶಾಸಕರಾಗಿ ಆಯ್ಕೆಯಾಗಿಲ್ಲ. ಗೆಲುವಿನ ಸಮೀಪಕ್ಕೆ ಬಂದರೂ ವಿಜಯ ದಕ್ಕಿಲ್ಲ. ಇನ್ನು ಎಸ್ಪಿಎಂ ಅವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದೇ ಆದರೆ ಕುಣಿಗಲ್ನ ಪ್ರಪ್ರಥಮ ಬಿಜೆಪಿ ಶಾಸಕ ಎಂಬ ಹೆಗ್ಗಳಿಕೆ ಅವರಿಗೆ ದಕ್ಕಲಿದೆ ಎಂದು ಚರ್ಚೆ ಶುರುವಾಗಿದೆ. ಅದ್ಹೇನೆ ಇರಲಿ ಮುದ್ದಹನುಮೇಗೌಡರು ಯಾವ ಪಕ್ಷಕ್ಕೆ ಸೇರುತ್ತಾರೆ ಎಂಬುದು ಅಧಿಕೃತ ಘೋಷಣೆ ಆಗಿಲ್ಲವಾದರೂ ಬಿಜೆಪಿ ಸೇರುತ್ತಾರೆ ಎಂಬ ಮಾತನ್ನು ತಳ್ಳಿಹಾಕುವಂತಿಲ್ಲ.