ಮೈಸೂರು: ರಾಮಕೃಷ್ಣ ನಗರದ ಶ್ರೀ ರಾಮಕೃಷ್ಣ ಜಾತ್ರೋತ್ಸವ ಸಮಿತಿ ವತಿಯಿಂದ ಫೆ.21 ರಿಂದ 26ರವರೆಗೆ ರಾಮಕೃಷ್ಣ ಪರಮಹಂಸರ ಜಯಂತಿ ಅಂಗವಾಗಿ ಬಡಾವಣೆಯ ರಾಮಕೃಷ್ಣ ಪರಮಹಂಸ ವೃತ್ತದಲ್ಲಿ ಆಧ್ಯಾತ್ಮಿಕ ಚಿಂತನ-ಮಂಥನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಫೆ.26ರಂದು ಸಂಜೆ 4 ಗಂಟೆಗೆ ಧಾರ್ಮಿಕ ಸಭೆ, ಸಂಜೆ 5 ಗಂಟೆಗೆ ರಥೋತ್ಸವ ಜರುಗಲಿದೆ. ರಾಮಕೃಷ್ಣ ಆಶ್ರಮದ ಅಧ್ಯಕ್ಷ ಮುಕ್ತಿದಾನಂದಜಿ ಮಹಾರಾಜ್, ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿಯ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಗಣಪತಿ ಸಚ್ಚಿದಾನಂದ ಆಶ್ರಮದ ಶ್ರೀ ದತ್ತ ವಿಜಯಾನಂದತೀರ್ಥ ಸ್ವಾಮೀಜಿ ಭಾಗವಹಿಸಲಿದ್ದಾರೆ ಎಂದು ಸಮಿತಿ ಕಾರ್ಯಾಧ್ಯಕ್ಷ ಡಿ.ಮಾದೇಗೌಡ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸುಯೋಗ್ ಆಸ್ಪತ್ರೆ ವತಿಯಿಂದ ನಿತ್ಯ ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆವರೆಗೆ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಅಷ್ಟೂ ದಿನ ನಿತ್ಯ ಆಧ್ಯಾತ್ಮಿಕ ಚಿಂತನ -ಮಂಥನ ಕಾರ್ಯಕ್ರಮ ಆಯೋಜಿಸಲಾಗಿದ್ದು, ಗಣ್ಯರು ಪಾಲ್ಗೊಳ್ಳಲಿದ್ದಾರೆ. ಯೋಗಾಸನ, ಭಜನೆ ಮೊದಲಾದವು ನಡೆಯಲಿವೆ ಎಂದು ತಿಳಿಸಿದರು.
21ರಂದು ಸಂಜೆ 6 ಗಂಟೆಗೆ ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ‘ವಿವೇಕಾನಂದರ ಸಾಹಿತ್ಯದಲ್ಲಿ ಅಧ್ಯಾತ್ಮ’ ಕುರಿತು, 22ರಂದು ಸಂಜೆ 6 ಗಂಟೆಗೆ ಆಧ್ಯಾತ್ಮಿಕ ಚಿಂತಕ ಶಂಕರ ದೇವನೂರು ‘ವಚನ ಸಾಹಿತ್ಯದಲ್ಲಿ ಅಧ್ಯಾತ್ಮ’, 23ರಂದು ಸಂಜೆ 6 ಗಂಟೆಗೆ ಸಾಹಿತಿ ಪ್ರೊ.ಸಿ.ನಾಗಣ್ಣ ‘ಕುವೆಂಪು ಸಾಹಿತ್ಯದಲ್ಲಿ ದರ್ಶನ’, 24ರಂದು ಸಂಜೆ 6 ಗಂಟೆಗೆ ವೈದ್ಯ ಸಾಹಿತಿ ಡಾ.ಎಸ್.ಪಿ.ಯೋಗಣ್ಣ ‘ಆಧ್ಯಾತ್ಮಿಕ ಆರೋಗ್ಯ’ ಕುರಿತು ಹಾಗೂ 25ರಂದು ಸಂಜೆ 6 ಗಂಟೆಗೆ ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ‘ಜೀವನಶೈಲಿಯ ಕಾಯಿಲೆಗಳು’ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ಸಮಿತಿಯ ಪದಾಧಿಕಾರಿಗಳಾದ ಡಾ.ಎಸ್.ಪಿ.ಯೋಗಣ್ಣ, ದೊರೆರಾಜ್, ಪ್ರಕಾಶ್, ಕೆಂಪಲಿಂಗರಾಜು ಹಾಜರಿದ್ದರು.