ಜಿಲ್ಲೆ

ದಾಂಡೇಲಿಯಲ್ಲಿ ಆಕರ್ಷಕ ಸಿಡಿಮದ್ದು ಪ್ರದರ್ಶನ ಅ.2ರಂದು

ಬಸವರಾಜ ವೀರಪ್ಪ ಗರಗ

ದಾಂಡೇಲಿ: ದಸರಾ ನಿಮಿತ್ತ ಅಕ್ಟೋಬರ್ 2ರಂದು ಜರುಗಲಿರುವ ದಾಂಡೇಲಿ ಪುರಮಾರ ಶ್ರೀ ದಾಂಡೇಲಪ್ಪನ ಜಾತ್ರೆ ಹಾಗೂ ಕಾಗದ ಕಾರ್ಖಾನೆ ನಡೆಸಿ ಕೊಡುವ ರಾಮಲೀಲಾ ಸಿಡಿಮದ್ದಿನ ಕಾರ್ಯಕ್ರಮ ಸಿದ್ಧತೆಯ ಪೂರ್ವಭಾವಿ ಸಭೆ ಗುರುವಾರ ಪಟ್ಟಣದ ಡಿಲಕ್ಸ್ ಸಭಾಂಗಣದಲ್ಲಿ ಜರುಗಿತು.

ಅಧ್ಯಕ್ಷತೆ ವಹಿಸಿದ್ದ ಡಿವೈಎಸ್ಪಿ ಶಿವಾನಂದ ಮದರಖಂಡಿ ಮಾತನಾಡಿ, ವಿವಿಧ ಇಲಾಖೆಗಳ ಮುಖ್ಯಸ್ಥರಿಗೆ ದಾಂಡೇಲಪ್ಪ ದೇವಸ್ಥಾನ ಸಮಿತಿ, ನಗರಸಭೆ ಅಧ್ಯಕ್ಷ, ಪೌರಾಯುಕ್ತರು, ಅರಣ್ಯ ಇಲಾಖೆ, ಲೋಕೋಪಯೋಗಿ, ತಹಸೀಲ್ದಾರ್, ತಾಪಂ ಅಧಿಕಾರಿಗಳು ಮತ್ತು ಕಾಗದ ಕಾರ್ಖಾನೆ ಪಿಆರ್​ಒಗಳಿಗೆ ದಸರಾ ಹಬ್ಬದ ಆಚರಣೆ ಹಾಗೂ ಸಿಡಿಮದ್ದಿನ ಕಾರ್ಯಕ್ರಮಕ್ಕೆ ಎಲ್ಲ ರೀತಿಯ ಸಹಾಯ, ಸಹಕಾರ ನೀಡಬೇಕು ಎಂದು ಕೋರಿದರು.

ಕಾಗದ ಕಾರ್ಖಾನೆ ಪಿಆರ್​ಒ ರಾಜೇಶ ತಿವಾರಿ ಮಾತನಾಡಿ, 80 ಸಾವಿರಕ್ಕೂ ಹೆಚ್ಚು ಜನ ಸೇರುವ ಸಿಡಿಮದ್ದಿನ ಕಾರ್ಯಕ್ರಮಕ್ಕೆ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ದೇವಸ್ಥಾನ ಸಮಿತಿ ಅಧ್ಯಕ್ಷ ಗುರುದತ್ತ ಮಿರಾಶಿ ಮಾತನಾಡಿ, ಜಾತ್ರೆ ದಿನದಂದೇ ಗಾಂಧಿ ಜಯಂತಿ ಅಹಿಂಸಾ ದಿನಾಚರಣೆ ಹಿನ್ನೆಲೆಯಲ್ಲಿ ಬಲಿಗಾಗಿ ಪ್ರಾಣಿ ಕೊಡುವ ಪದ್ಧತಿ ನಿರ್ಬಂಧಿಸಲಾಗಿದೆ. ಕಿತ್ತೂರು ಚನ್ನಮ್ಮ ವೃತ್ತದಿಂದ 3 ನಂ. ಗೇಟ್​ವರೆಗೆ ಹಾಗೂ ಬಾಂಬುಗೇಟ್​ವರೆಗೆ ಗುಜರಿ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಕೂಡದು. ಅ. 1ರಂದು ಸಂಜೆಯಿಂದ ಅ. 2ರ ಮಧ್ಯರಾತ್ರಿಯವರೆಗೆ ಕಿತ್ತೂರು ಚನ್ನಮ್ಮ ವೃತ್ತದಿಂದ ಕೇರವಾಡ ಮಾರ್ಗದಲ್ಲಿ ವಾಹನ ಸಂಚಾರ ನಿರ್ಬಂಧಿಸಿ ಬರ್ಚಿ-ಶಿರಗೂರ ನಿಮಿತ್ತ ಹಳಿಯಾಳ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷ ಅಶ್ಪಾಕ ಶೇಖ್, ಪೌರಾಯುಕ್ತ ವೀವೆಕ ಬನ್ನಿ, ತಹಸೀಲ್ದಾರ್ ಶೈಲೇಶ ಪರಮಾನಂದ, ತಾಪಂ ಇಒ ಟಿ.ಸಿ. ಹಾದಿಮನಿ, ಆಲೂರ ಪಂಚಾಯಿತಿ ಅಧ್ಯಕ್ಷ ನೂರಜಾನ ನದಾಫ್, ಕಾಗದ ಕಾರ್ಖಾನೆ ಪಿಆರ್​ಒ ಜಿ.ಆರ್. ರಾಘವೇಂದ್ರ ಇತರರಿದ್ದರು.

ಸಿಪಿಐ ಜಯಪಾಲ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮೀಣ ಪಿಎಸ್​ಐ ಶಿವಾನಂದ ನಾವದಗಿ, ಇತರರು ಉಪಸ್ಥಿತರಿದ್ದರು. ಪಿಎಸ್​ಐ ಕಿರಣ ಪಾಟೀಲ ಕಾರ್ಯಕ್ರಮ ನಿರ್ವಹಿಸಿದರು.