ವಿಜಯಪುರ: ನಿರ್ದಿಷ್ಟ ಗುರಿ ಹೊಂದಿದ್ದರೆ ಮಾತ್ರ ವಿದ್ಯಾರ್ಥಿಗಳು ಸಾಧನೆ ಮಾಡಲು ಸಾಧ್ಯ ಎಂದು ವಿಜಯಪುರದ 36 ಕರ್ನಾಟಕ ಬಟಾಲಿಯನ್ ಎನ್‌ಸಿಸಿ ಕಮಾಂಡಿಂಗ್ ಅಧಿಕಾರಿ ಗಿರೀಶ ಶಿಂಧೆ ಹೇಳಿದರು.
ನಗರದ ಬಿಎಲ್‌ಡಿಇ ಸಂಸ್ಥೆಯ ಎಸ್‌ಬಿ ಕಲಾ ಮತ್ತು ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ, ಎ.ಎಸ್.ಪಾಟೀಲ ವಾಣಿಜ್ಯ ಮಹಾವಿದ್ಯಾಲಯ, ಸರ್ಕಾರಿ ಪ.ಪೂ. ಕಾಲೇಜು ಮತ್ತು ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಎನ್‌ಸಿಸಿ 76ನೇ ರೈಸಿಂಗ್ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಾವು ಗುರಿ ಮುಟ್ಟಬೇಕೆಂದರೆ ತಮ್ಮಲ್ಲಿ ಮೊದಲು ಶಿಸ್ತು ಅಳವಡಿಸಿಕೊಳ್ಳಬೇಕು ಎಂದರು.
ಜೀವನದಲ್ಲಿ ಸಾಧನೆ ಮಾಡಲು ಮೊದಲು ಪೂರ್ವಸಿದ್ಧತೆ ಮಾಡಿಕೊಳ್ಳಬೇಕು. ಯಾವುದೇ ಒಂದು ವಸ್ತು ಸುಲಭವಾಗಿ ಸಿಗುವುದಿಲ್ಲ. ಒಂದನ್ನು ಪಡೆಯಲು ಮತ್ತೊಂದನ್ನು ಕಳೆದುಕೊಳ್ಳಬೇಕಾಗುತ್ತದೆ. ಯಾವುದೇ ವಾಮ ಮಾರ್ಗ ಹಿಡಿಯದೆ ಶ್ರಮದಾರಿ ತುಳಿಯಬೇಕು ಎಂದು ಸಲಹೆ ನೀಡಿದರು.
ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಆರ್.ಎಂ. ಮಿರ್ದೆ ಮಾತನಾಡಿ, ಉತ್ತಮ ಸಮಾಜ ಕಟ್ಟುವ ನಿಟ್ಟಿನಲ್ಲಿ ಯುವಜನತೆ ಶಿಸ್ತು, ಸಂಯಮ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಮೇಜರ್ ಡಾ. ಪಿ.ಡಿ. ನೇಡಗಿ ಮಾತನಾಡಿದರು. ರೈಸಿಂಗ್ ದಿನಾಚರಣೆ ಹಿನ್ನೆಲೆಯಲ್ಲಿ ರಕ್ತದಾನ ಶಿಬಿರ ನಡೆಯಿತು. ಅಲ್ಲದೆ, ಮಹಾವಿದ್ಯಾಲಯದ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.
ಕ್ಯಾಪ್ಟನ್ ಎಸ್.ಎ. ಪಾಟೀಲ, ಕ್ಯಾಪ್ಟನ್ ಎಂ.ಬಿ. ಕನ್ನೂರ, ಸುಬೇದಾರ ಪ್ರಮೋದ, ಎನ್‌ಸಿಸಿ ಅಧಿಕಾರಿಗಳಾದ ಡಾ. ರಾಮಚಂದ್ರ ನಾಯಕ, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮತ್ತಿತರರಿದ್ದರು.