ಜಿಲ್ಲೆ

ಬಾನು ಮುಷ್ತಾಕ್​ರ ಕತೆಗಳಲ್ಲಿದೆ ವಾಸ್ತವ...

ಡಾ. ಪ್ರವೀಣಕುಮಾರ್​ ಅಭಿಪ್ರಾಯ

ಉಡುಪಿ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ

ವಿಜಯವಾಣಿ ಸುದ್ದಿಜಾಲ ಉಡುಪಿ

ಬಾನು ಮುಷ್ತಾಕ್​ ಅವರ ಬದುಕಿನ ಅನುಭವಗಳೇ ಅವರ ಕತೆಗಳಲ್ಲಿ ಅಡಕವಾಗಿದೆ. ಸಮಾಜದ ಕಟ್ಟ ಕಡೆಯ ಹೆಣ್ಣಿನ ಶೋಚನೀಯ ಸಂಗತಿ ತೆರೆದಿಡುವ ಹೋರಾಟಗಾರ್ತಿಯಾಗಿ, ಪತ್ರಕರ್ತೆಯಾಗಿ ತೊಡಗಿಸಿಕೊಂಡಿರುವ ಅವರ ಕತೆಗಳಲ್ಲಿ ಪ್ರಯೋಗಶೀಲ ತಂತ್ರಗಳಿಲ್ಲ. ವಾಸ್ತವ ಸತ್ಯಾಸತ್ಯತೆಯನ್ನು ತೆರೆದಿಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಎಂದು ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಪ್ರಾಧ್ಯಾಪಕ ಡಾ. ಪ್ರವೀಣಕುಮಾರ್​ ಅನಿಸಿಕೆ ವ್ಯಕ್ತಪಡಿಸಿದರು.

ಉಡುಪಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು, ಚಕೋರ ಸಾಹಿತ್ಯ ವಿಚಾರ ವೇದಿಕೆ ಉಡುಪಿ ಆಶ್ರಯದಲ್ಲಿ ಜೂನ್​ 24ರಂದು ಆಯೋಜಿಸಿದ್ದ ಎದೆಯ ಹಣತೆಯ ಬೆಳಕು ಬೂಕರ್​ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್​ ಅವರ ಕತೆಗಳ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಉಡುಪಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಲೀಲಾಬಾಯಿ ಭಟ್​ ಅಧ್ಯಕ್ಷತೆ ವಹಿಸಿದ್ದರು. ಜಿ.ಎಂ. ಶರೀಫ್​ ಹೂಡೆ ಉಪಸ್ಥಿತರಿದ್ದರು.

ಕನ್ನಡ ವಿಭಾಗದ ಮುಖ್ಯಸ್ಥ ನಾಗರಾಜ ಸ್ವಾಗತಿಸಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ, ಹಿರಿಯಡ್ಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ. ಜಯಪ್ರಕಾಶ ಶೆಟ್ಟಿ ಎಚ್​. ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ಸಂಘದ ಸಂಚಾಲಕಿ ಗ್ರೇಸಿ ಕೆ.ಜೆ. ವಂದಿಸಿದರು. ಚಕೋರ ಉಡುಪಿ ಜಿಲ್ಲಾ ಸಂಚಾಲಕಿ ಶಾಲಿನಿ ಯು.ಬಿ. ಕಾರ್ಯಕ್ರಮ ನಿರೂಪಿಸಿದರು.