ಜಿಲ್ಲೆ

ದಸರಾ ಅಂಗವಾಗಿ ವಿಶೇಷ ದಾಂಡಿಯಾ ನೃತ್ಯ ಪ್ರದರ್ಶನ

ಮೈಸೂರು: ದಸರಾ ಅಂಗವಾಗಿ ನಗರದ ರೋಟರಿ ಐವರಿ ಸಿಟಿ ಶಾಖೆಯಿಂದ ವಿಶೇಷ ದಾಂಡಿಯಾ ನೃತ್ಯ ಪ್ರದರ್ಶನ ಆಯೋಜಿಸಲಾಗಿತ್ತು.
ಕುವೆಂಪು ನಗರದ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ರೋಟರಿ ಸಂಸ್ಥೆಯ ಜಿಲ್ಲೆ 3181ರ ರಾಜ್ಯಪಾಲ ವಿಕ್ರಂ ದತ್ತ ಚಾಲನೆ ನೀಡಿ, ಸೇವಾ ಭಾವನೆಯಿಂದ ಕಾರ್ಯ ನಿರ್ವಹಿಸುತ್ತಿರುವ ರೋಟರಿ ಸಂಸ್ಥೆ, ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಂಘಟಿಸುತ್ತಿದೆ ಎಂದರು.
ನೊಂದ ಕುಟುಂಬಗಳನ್ನು ಗುರುತಿಸಿ ನೆರವು ನೀಡುವ ಉದ್ದೇಶವನ್ನು ರೋಟರಿ ಸಂಸ್ಥೆ ಹೊಂದಿದೆ. ಆರೋಗ್ಯ, ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟು, ಸಮುದಾಯದ ಕೆಲಸಗಳಿಗೆ ಸ್ಪಂದಿಸುವುದು ಇದರ ಮೂಲ ಧ್ಯೇಯವಾಗಿದೆ. ಮನುಷ್ಯ ನಿಸ್ವಾರ್ಥಿಗಳಾಗಿ, ಸೇವಾ ಮನೋಭಾವನೆ ಹೊಂದಿ, ತಮ್ಮ ಕೈಲಾದ, ಸಹಕಾರ ನೀಡಿದಾಗ ಜೀವನ ಸಾರ್ಥಕವೆನಿಸುತ್ತದೆ. ಈಗಾಗಲೇ ಮೈಸೂರು, ಚಾಮರಾಜನಗರ, ಕೊಡಗು, ದಕ್ಷಿಣ ಕನ್ನಡದಲ್ಲಿ ಒಟ್ಟು 88 ರೋಟರಿ ಕ್ಲಬ್‌ಗಳಿದ್ದು, 3,750ಕ್ಕೂ ಹೆಚ್ಚು ಸದಸ್ಯರು ಸೇವಾ ಕಾರ್ಯಕ್ರಮದಲ್ಲಿ ತೊಡಗಿರುವುದು ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ರೋಟರಿ ಐವರಿ ಸಿಟಿಯ ಅಧ್ಯಕ್ಷ ಕೆ.ಶಶಿಧರ್ ಮಾತನಾಡಿ, ನವರಾತ್ರಿ ಸಂಭ್ರಮದಲ್ಲಿರುವ ನಾವು ಒಂದಾಗಿ ಸೇರಿ, ನಾಡಿನ ಅಭಿವೃದ್ಧಿ ಹಾಗೂ ಶ್ರೇಯಸ್ಸಿಗಾಗಿ ಆಚರಿಸುವ ಹಬ್ಬವೇ ದಾಂಡಿಯಾ ನೃತ್ಯ. ಗುಜರಾತ್‌ನ ಸಾಂಪ್ರದಾಯಿಕ ಜಾನಪದ ನೃತ್ಯ ದಾಂಡಿಯಾ ಜನರ ಬದುಕು ಹಾಗೂ ಸಂಭ್ರಮವನ್ನು ಪ್ರತಿಬಿಂಬಿಸುವ ಭಾವೈಕ್ಯತೆಯನ್ನು ಬೆಸೆಯುವ ಸಾಮರಸ್ಯದ ಸಂಕೇತವಾಗಿದೆ ಎಂದು ಹೇಳಿದರು.
ಇಂತಹ ಹಬ್ಬಗಳನ್ನು ಆಚರಿಸುವುದರಿಂದ ನೊಂದ ಮನಸ್ಸುಗಳಿಗೆ, ಸಮಾಜದ ಬಡ ಕುಟುಂಬಗಳಿಗೆ ಸಹಾಯ ಮಾಡಲು ಅನುಕೂಲವಾಗುತ್ತದೆ. ಈ ದಿನ ಬಂದ 8. 60 ಲಕ್ಷ ರೂ.ಅನ್ನು ಜಯಲಕ್ಷ್ಮೀಪುರಂನಲ್ಲಿರುವ ಸತ್ಯ ಸಾಯಿಬಾಬಾ ಶಿಕ್ಷಣ ಸಂಸ್ಥೆಯ ಬಡ ಮಕ್ಕಳ ವಿದ್ಯಾಭ್ಯಾಸ, ಶೈಕ್ಷಣಿಕ ಕೆಲಸ ಕಾರ್ಯಗಳಿಗೆ ನೀಡಲಾಗಿದೆ ಎಂದರು.
ರೋಟರಿ ಸಹಾಯಕ ಪ್ರಾಂತಪಾಲರಾದ ಡಾ.ಕೆ.ಎ.ಪ್ರಹ್ಲಾದ್, ಆರ್.ವೆಂಕಟೇಶ್, ಕಾರ್ಯದರ್ಶಿ ಶೋಭಾ ನಾಗರಾಜ್, ವಿವಿಧ ಪದಾಧಿಕಾರಿಗಳಾದ ಸುನಿಲ್ ಬಾಳಿಗಾ, ಡಾ.ಸಚ್ಚಿದಾನಂದ, ಇಫ್ತಿಕಾರ್ ಅಹಮದ್, ಪೂಜಾ ಬಾಳಿಗ, ಬಾಬು, ಎಂ.ಕೆ.ಮುಖೇಶ್, ಕೇಶವ್ ಬಿ.ಕಾಂಚನ್ ಇತರರು ಇದ್ದರು.