ಜಿಲ್ಲೆ

ಜನರ ಗೋಳಿಗೆ ದೊರೆಯದ ಪರಿಹಾರ

ಜೊಯಿಡಾ: ಸದಾಶಿವಗಡ-ಔರಾದ್ ರಾಜ್ಯ ಹೆದ್ದಾರಿ-34ರ ಅಣಶಿ ಘಟ್ಟದಲ್ಲಿ ಭಾರಿ ವಾಹನ ಹಾಗೂ ರಾತ್ರಿ ಎಲ್ಲ ರೀತಿಯ ವಾಹನ ಸಂಚಾರವನ್ನು ಜಿಲ್ಲಾಡಳಿತ ನಿಷೇಧಿಸಿದ ಕಾರಣ ಸಮರ್ಪಕ ಬಸ್ ಸಂಚಾರವಿಲ್ಲದೆ ವಿದ್ಯಾರ್ಥಿಗಳು, ಜನ ತೊಂದರೆಪಡುತ್ತಿದ್ದಾರೆ.
ಅಣಶಿ ಘಟ್ಟದಲ್ಲಿ ಗುಡ್ಡ ಕುಸಿತ ಉಂಟಾಗಿದ್ದರಿಂದ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ರಾತ್ರಿ ವೇಳೆ ವಾಹನ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಜು. 6ರಂದು ಆದೇಶಿಸಿದ್ದರು. ಜು. 12ರಿಂದ 18ರವರೆಗೆ ಸಂಪೂರ್ಣ ವಾಹನ ಸಂಚಾರ ಬಂದ್ ಮಾಡಲಾಯಿತು. ಈಗ ಎರಡು ವಾರಗಳಿಂದ ಬೆಳಗ್ಗೆ 7ರಿಂದ ಸಾಯಂಕಾಲ 7ರವರೆಗೆ ಮಾತ್ರ ಲಘು ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದರಿಂದ ಇಲ್ಲಿ ಸಾರಿಗೆ ಸಂಸ್ಥೆಯ ಮಿನಿ ಬಸ್​ಗಳು ಮಾತ್ರ ಓಡಾಡುತ್ತಿವೆ. ಮಾರ್ಗದಲ್ಲಿ ಓಡಾಡುವ ಬಸ್​ಗಳನ್ನೇ ನೆಚ್ಚಿಕೊಂಡಿದ್ದ ವಿದ್ಯಾರ್ಥಿಗಳು ಈಗ ಖಾಸಗಿ ವಾಹನಗಳಿಗಾಗಿ ಕಾಯಬೇಕಿದೆ. ಇನ್ನು ಕೆಲವು ಕಿ.ಮೀ. ನಡೆದು ಗಮ್ಯ ತಲುಪುತ್ತಿದ್ದಾರೆ.
ಈ ಮೊದಲು ಕಾರವಾರ, ಕುಮಟಾ ಡಿಪೊಗಳಿಂದ ಪ್ರತಿ ದಿನ 10 ಕ್ಕೂ ಅಧಿಕ ಬಸ್​ಗಳು ಈ ಮಾರ್ಗದಲ್ಲಿ ಬೆಳಗಾವಿ, ಪುಣೆ ಮುಂತಾದೆಡೆ ತೆರಳುತ್ತಿದ್ದವು. ಈಗ ಕಾರವಾರ ಡಿಪೊದಿಂದ ಪ್ರತಿ ದಿನ 1 ಮಿನಿ ಬಸ್ ಮಾತ್ರ ದಾಂಡೇಲಿಗೆ ಹೋಗಿ ವಾಪಸಾಗುತ್ತಿದೆ. ದಾಂಡೇಲಿ ಡಿಪೊದಿಂದ ಕೆಲವು ಬಸ್​ಗಳನ್ನು ಮಾತ್ರ ಬಿಡಲಾಗುತ್ತಿದೆ. ಇದರಿಂದ ಅಣಶಿಯಿಂದ ಜೊಯಿಡಾ, ರಾಮನಗರ, ಜಗಲಬೇಟ ಭಾಗದಿಂದ ಜೊಯಿಡಾಕ್ಕೆ ಬರುವ ಪ್ರೌಢಶಾಲೆ, ಕಾಲೇಜ್ ವಿದ್ಯಾರ್ಥಿಗಳು ಹಳಿಯಾಳ ಭಾಗದಿಂದ ಜೊಯಿಡಾ ಡಿಪ್ಲೊಮಾ ಕಾಲೇಜ್​ಗೆ ಆಗಮಿಸುವ ನೂರಾರು ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ ಸಿಗುತ್ತಿಲ್ಲ. ಇನ್ನು ಸರ್ಕಾರಿ ಖಾಸಗಿ ಉದ್ಯೋಗಿಗಳಿಗೆ ದಿನನಿತ್ಯದ ವ್ಯವಹಾರಗಳಿಗೆ ಜೊಯಿಡಾ, ರಾಮನಗರ ಮುಂತಾದೆಡೆ ತೆರಳಲೂ ಇದರಿಂದ ತೊಂದರೆಯಾಗಿದೆ. ಮಾತ್ರವಲ್ಲ, ರಾತ್ರಿ ವೇಳೆ ತುರ್ತು ಚಿಕಿತ್ಸೆ ಅವಶ್ಯವಿರುವವರು ಕಾರವಾರದ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಬದಲು ಹುಬ್ಬಳ್ಳಿ, ಬೆಳಗಾವಿಗೆ ತೆರಳಬೇಕಾದ ಪರಿಸ್ಥಿತಿ ನಿರ್ವಣವಾಗಿದೆ. ಇದರಿಂದ ವೆಚ್ಚ ಹೆಚ್ಚಾಗುತ್ತಿದೆ.
ಜನಪ್ರತಿನಿಧಿಗಳ ನಿರ್ಲಕ್ಷ್ಯ: ಕಳೆದ ವರ್ಷ ಗುಡ್ಡ ಕುಸಿದ ಕಾರಣ ಎರಡು ತಿಂಗಳು ವಾಹನ ಸಂಚಾರವನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು. ಲೋಕೋಪಯೋಗಿ ಇಲಾಖೆಯ ಬದಲು ಸ್ಥಳೀಯರೇ ಮಣ್ಣು ತೆರವು ಮಾಡಿ ವಾಹನ ಸಂಚಾರ ಪ್ರಾರಂಭಿಸಿದ್ದರು. ಈ ಬಾರಿ ಮತ್ತೆ ಅದೇ ಸಮಸ್ಯೆಯಾಗಿದೆ. ಆದರೂ ಸರ್ಕಾರ ರಸ್ತೆ ದುರಸ್ತಿಗೆ ಶಾಶ್ವತ ಕ್ರಮ ವಹಿಸಿಲ್ಲ. ಎಷ್ಟೊಂದು ಸಮಸ್ಯೆಯಾಗುತ್ತಿದ್ದರೂ ಜನಪ್ರತಿನಿಧಿಗಳು ಮಾತೆತ್ತುತ್ತಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪೊಟೊಲಿ ಕ್ರಾಸ್​ನಿಂದ ಗುಂದ ಹಾಗೂ ಯಲ್ಲಾಪುರಕ್ಕೆ ಹೋಗುವ ರಸ್ತೆಯನ್ನು ಸಾಯಂಕಾಲ 6ರ ನಂತರ ಬಂದ್ ಮಾಡಲಾಗುತ್ತದೆ. ಉಳವಿ-ಅಣಶಿ, ಉಳವಿ-ಪೊಟೊಲಿ ರಸ್ತೆಯಲ್ಲೂ ರಾತ್ರಿ ವಾಹನ ಸಂಚಾರಕ್ಕೆ ನಿಷೇಧವಿದೆ. ಸ್ಥಳೀಯರಿಗೂ ಓಡಾಡಲು ಅರಣ್ಯಾಧಿಕಾರಿಗಳು ಕಿರಿಕಿರಿ ಮಾಡುತ್ತಿದ್ದಾರೆ. ಗಣೇಶಗುಡಿಯಲ್ಲಿ ಕೆಪಿಸಿಯವರು ಸ್ಥಳೀಯ ವಾಹನಗಳನ್ನು ಬಿಡುವುದಿಲ್ಲ. ತಿಂಗಳಿಂದ ಕಾರವಾರ-ಜೊಯಿಡಾ ನಡುವೆ ವಾಹನ ಸಂಚಾರ ಬಂದ್ ಮಾಡಲಾಗಿದೆ. ನಿಜಕ್ಕೂ ಜನ ರೋಸಿ ಹೋಗಿದ್ದಾರೆ. ಜಿಲ್ಲಾಧಿಕಾರಿ ತಕ್ಷಣವೆ ನಿಷೇಧ ಆದೇಶ ಹಿಂಪಡೆದು ಕಾರವಾರ-ಜೊಯಿಡಾ ನಡುವೆ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ಇಲ್ಲದೇ ಇದ್ದಲ್ಲಿ ಗಂಭೀರ ಹೋರಾಟಕ್ಕೆ ಇಳಿಯುವುದು ಅನಿವಾರ್ಯವಾಗುತ್ತದೆ.-ರವಿ ರೇಡ್ಕರ್ಕಾಳಿ ಬ್ರಿಗೇಡ್ ಅಧ್ಯಕ್ಷಸಂಬಂಧಪಟ್ಟ ಡಿಪೋ ಮ್ಯಾನೇಜರ್​ಗಳ ಬಳಿ ಮಾತನಾಡಿಯೇ ವಿದ್ಯಾರ್ಥಿಗಳ ಓಡಾಟದ ಸಮಯಕ್ಕೆ ಬಸ್ ಬಿಡಲಾಗುತ್ತಿದೆ. ಆದರೂ ಇಂಥ ಸಮಸ್ಯೆ ಉಂಟಾಗುತ್ತಿರುವುದು ನನ್ನ ಗಮನಕ್ಕೆ ಬಂದಿಲ್ಲ. ತಕ್ಷಣ ಸ್ಥಳೀಯ ಅಧಿಕಾರಿಗಳಿಗೆ ತಿಳಿಸಿ, ಸಭೆ ಮಾಡಿ, ಹೆಚ್ಚುವರಿ ಬಸ್ ಬಿಡುವ ವ್ಯವಸ್ಥೆ ಮಾಡಲಾಗುವುದು.ಮುಲ್ಲೈ ಮುಗಿಲನ್ಉ.ಕ. ಜಿಲ್ಲಾಧಿಕಾರಿ