ಜಿಲ್ಲೆ

ದೈವಿ ಕಲ್ಲು ಇದ್ದವರ ಬಳಿ ಅದೃಷ್ಟ ಒಲಿಯುತ್ತೆ... ಎಂದು ಯೂಟೂಬ್​ಗೆ ವಿಡಿಯೋ ಹಾಕಿ ಮಾಡಬಾರದ್ದು ಮಾಡಿ ಸಿಕ್ಕಿಬಿದ್ದ!

arunakunigal

ಬಾಗಲಕೋಟೆ: ನನ್ನ ಬಳಿ ದೈವಿ ಕಲ್ಲು ಇದೆ, ಈ ಕಲ್ಲು ಇರುವವರಿಗೆ ಅದೃಷ್ಟ ಒಲಿಯುತ್ತೆ ಎಂದು ಯೂಟೂಬ್​ನಲ್ಲಿ ವಿಡಿಯೋ ಅಪ್​ಲೋಡ್​ ಮಾಡಿದ್ದವ ಮಾಡಬಾರದ್ದು ಮಾಡಿ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಬಾಗಲಕೋಟೆ ನಗರದ ನಿವಾಸಿ ಅಜಯ ಅಲಿಯಾಸ್​ ಸಮೀರ್​ ಜಾಫರ್​ ಜಾಹಗೀರದಾರ ಬಂಧಿತ. ನಿಮಗೆ ಅದೃಷ್ಟ ಒಲಿಯಬೇಕೆ? ಹಾಗಿದ್ದರೆ 7 ಲಕ್ಷ ರೂಪಾಯಿ ಕೊಡಿ, ದೈವಿ ಕಲ್ಲು(ಸೊಲೆಮಾನ್​ ಸ್ಟೋನ್​) ನೀಡುವೆ. ಈ ಕಲ್ಲು ನಿಮ್ಮ ಬಳಿ ಇದ್ದರೆ ಅದೃಷ್ಟ ಒಲಿಯುತ್ತೆ ಎಂದು ಯೂಟೂಬ್​ಗೆ ಅಜಯ ವಿಡಿಯೋ ಹಾಕಿದ್ದ.

ಈ ವಿಡಿಯೋ ನೋಡಿದ ಅಶೋಕ ರೇವಣಸಿದ್ದಪ್ಪ ಇಂಡಿ ಎಂಬಾತ, ದೈವಿಕಲ್ಲು ಕೊಡುವಂತೆ ಅಜಯಗೆ 5 ಲಕ್ಷ ರೂ. ನಗದು, ಕೈ​ ಚೈನ್​ (ಚಿನ್ನದ ಆಭರಣ) ನೀಡಿದ್ದರು. ಆದರೆ, ಇದೆಲ್ಲವೂ ಸುಳ್ಳು, ದೈವು ಕಲ್ಲು ಎಂದು ನಂಬಿಸಿ ಹಣ ಪೀಕುವ ದಂಧೆ ಇದು ಎಂದು ಅರಿವಾಗುತ್ತಿದ್ದಂತೆ ಅಶೋಕ ಇಂಡಿ ಅವರು ಬಾಗಲಕೋಟೆಯ ಶಹರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಡಿವೈಎಸ್​ಪಿ ಚಂದ್ರಕಾಂತ ನಂದರಡ್ಡಿ ಮಾರ್ಗದಶನದಲ್ಲಿ ಬಾಗಲಕೋಟೆ ಪಿಎಸ್​ಐ ವಿಜಯ ಮುರಗುಂಡಿ, ಎಎಸ್​ಐ ವಿ.ಕೆ.ಕುಲಕರ್ಣಿ, ಸಿಬ್ಬಂದಿ ಎಂ.ಡಿ.ಸೌದಿ, ವಿ.ಬಿ.ಹಾದಿಮನಿ, ಮುತ್ತು ಅಜಮನಿ, ನಾಸೀರ್​ ಬೀಳಗಿ ಒಳಗೊಂಡ ತಂಡವು ಆರೋಪಿ ಅಜಯನನ್ನು ಬಂಧಿಸಿದ್ದಾರೆ. ಆತನಿಂದ 5 ಲಕ್ಷ ರೂ. ನಗದು, ಒಂದು ಚಿನ್ನದ ಬ್ರಾಸ್​ಲೇಟ್​ ವಶಕ್ಕೆ ಪಡೆದಿದ್ದಾರೆ. ಪೊಲೀಸ್​ ಸಿಬ್ಬಂದಿ ಕಾರ್ಯಾಚರಣೆಗೆ ಎಸ್ಪಿ ಲೋಕೇಶ ಜಗಲಾಸರ್​ ಮೆಚ್ಚುಗೆ ವ್ಯಕ್ತಪಡಿಸಿ ನಗದು ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ.