ಜಿಲ್ಲೆ

ಮೌಲ್ಯಗಳ ಬದಲಾಗಿ ಅಧಿಕಾರ ಗೌರವಿಸುವ ಸಮಾಜ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ಇಂದಿನ ಸಮಾಜದಲ್ಲಿ ಭ್ರಷ್ಟರ ಬಗೆಗಿನ ವರ್ತನೆ ಬದಲಾಗಿದೆ. ಸಮಾಜವು ಆದರ್ಶ ಮತ್ತು ಮೌಲ್ಯಗಳ ಬದಲಾಗಿ ಅಧಿಕಾರ ಮತ್ತು ಹಣವನ್ನು ಗೌರವಿಸುತ್ತದೆ. ಇದು ಆರೋಗ್ಯಕರ ಲಕ್ಷಣವಲ್ಲ ಎಂದು ವಿಶ್ರಾಂತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗಡೆ ಕಳವಳ ವ್ಯಕ್ತಪಡಿಸಿದರು.

ನೈಋತ್ಯ ರೈಲ್ವೆ ವಲಯದ ವತಿಯಿಂದ ಇಲ್ಲಿನ ರೈಲ್ ಸೌಧದಲ್ಲಿ ಮಂಗಳವಾರ ಆಯೋಜಿಸಿದ್ದ ವಿಚಕ್ಷಣ ಜಾಗೃತ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವೈಯಕ್ತಿಕ ಬದುಕು ಮತ್ತು ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕತೆ ಅಳವಡಿಸಿಕೊಳ್ಳುವುದು ಬಹು ಮುಖ್ಯ. ದುರಾಸೆ ಒಂದು ರೋಗ. ತೃಪ್ತಿ ಮಾತ್ರ ಅದಕ್ಕೆ ಇರುವ ಏಕೈಕ ಚಿಕಿತ್ಸೆ. ಪ್ರತಿಯೊಬ್ಬರೂ ಜೀವನದಲ್ಲಿ ಸಂತೃಪ್ತಿ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಮುಕುಲ ಸರನ್ ಮಾಥುರ ಮಾತನಾಡಿ, ಸಮಾಜದಲ್ಲಿ ಬದಲಾವಣೆ ಆಗಬೇಕೆಂದು ಆಶಿಸುವವರು ಮೊದಲು ತಮ್ಮನ್ನು ಬದಲಾಯಿಸಿಕೊಳ್ಳಬೇಕು. ಪ್ರತಿಯೊಬ್ಬರೂ ವೈಯಕ್ತಿಕವಾಗಿ ಬದಲಾವಣೆಯಾದರೆ, ಸಮಾಜ ತನ್ನಿಂದ ತಾನೇ ಬದಲಾಗುತ್ತದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ವಿಶೇಷ ವಿಜಿಲೆನ್ಸ್ ಮ್ಯಾಗಜಿನ್ ಸಂಕಲ್ಪ ಲೋಕಾರ್ಪಣೆಗೊಳಿಸಲಾಯಿತು. ಅಪರ ಪ್ರಧಾನ ವ್ಯವಸ್ಥಾಪಕ ಪಿ. ಅನಂತ, ಎಸ್​ಡಿಜಿಎಂ ಎ. ಅಣ್ಣಾದುರೈ ಹಾಗೂ ಇತರರು ಇದ್ದರು.