ರಾಷ್ಟ್ರಪತಿ ಪಿ.ವಿ.ಗಿರಿ ಅವರು ಕ್ಯಾ.ನಾರಾಯಣ ಅತ್ತಿ ಮರದ ಅವರಿಗೆ ಶೌರ್ಯಚಕ್ರ ಪ್ರಶಸ್ತಿ ನೀಡುತ್ತಿರುವುದು. 
ಜಿಲ್ಲೆ

ಯೋಧರಿಗೆ ಅಲ್ಪ ಬಹುಮಾನ, ಶೌರ್ಯಚಕ್ರಕ್ಕೆ ಅಪಮಾನ!; ದೇಶದ ಉನ್ನತ ಪ್ರಶಸ್ತಿ ಪುರಸ್ಕೃತರಿಗೆ 25 ರೂ. ನೀಡಲು ಆದೇಶ

| ರವಿ ಗೋಸಾವಿ ಬೆಳಗಾವಿ

ಸಂಘ-ಸಂಸ್ಥೆ, ಸರ್ಕಾರಗಳು ನೀಡುವ ಪ್ರಶಸ್ತಿ-ಪುರಸ್ಕಾರಗಳು ಸಾಧಕರ ಘನತೆ, ಗೌರವ ಹೆಚ್ಚಿಸಬೇಕು. ಆದರೆ ದೇಶದ ಉನ್ನತ ಪ್ರಶಸ್ತಿಗಳಲ್ಲೊಂದಾದ ‘ಶೌರ್ಯ ಚಕ್ರ’ ಪುರಸ್ಕೃತರಿಗೆ ರಾಜ್ಯ ಸರ್ಕಾರ ನೀಡಲು ಹೊರಟಿರುವ ಬಹುಮಾನ ಅಪಮಾನಕ್ಕೀಡು ಮಾಡುತ್ತಿದೆ.

ಇಂಡೋ-ಪಾಕ್ ಯುದ್ಧದಲ್ಲಿ ಭಾರತೀಯ ನೌಕಾದಳದಿಂದ ಭಾಗವಹಿಸಿದ್ದ ಯೋಧ, ‘ಶೌರ್ಯ ಚಕ್ರ’ ಪುರಸ್ಕೃತ ಕ್ಯಾಪ್ಟನ್ ನಾರಾಯಣ ಅತ್ತಿಮರದ ಅವರಿಗೆ ಸರ್ಕಾರ ಕೇವಲ 25 ರೂ. ಮೊತ್ತದ ಬಹುಮಾನ ನೀಡುತ್ತಿರುವುದಾಗಿ ತಿಳಿಸಿದೆ. ಇದು ಮೂಲ ಪುರಸ್ಕಾರದ ಘನತೆ ಕುಂದಿಸುತ್ತಿದೆ ಎಂದು ನೌಕಾದಳದ ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಅಶೋಕ ಪಾಟೀಲ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶೌರ್ಯ ಚಕ್ರ ಪುರಸ್ಕೃತರಿಗೆ ರಾಜ್ಯ ಸರ್ಕಾರ 25 ಲಕ್ಷ ರೂ. ಬಹುಮಾನ ಘೊಷಿಸಿದೆ. ಇ-ಜನಸ್ಪಂದನ ಮೂಲಕ ಅತ್ತಿಮರದ ಸಲ್ಲಿಸಿದ ಅರ್ಜಿ ಪರಿಶೀಲಿಸಿದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಧೀನ ಕಾರ್ಯದರ್ಶಿ ಆರ್.ಎಸ್.ಮೂರ್ತಿ, 25 ರೂ. ನಗದು ಬಹುಮಾನ ವಿತರಣೆಗೆ ಕ್ರಮ ವಹಿಸುವಂತೆ ಜು.23ರಂದು ಒಳಾಡಳಿತ ಇಲಾಖೆಗೆ ಆದೇಶಿಸಿದ್ದಾರೆ.

ಇನ್ನೂ ಬಾರದ 8 ಲಕ್ಷ ರೂ.: ನೌಕಾದಳದಿಂದ 1987ರಲ್ಲಿ ನಿವೃತ್ತಿ ಯಾಗಿರುವ ನಾರಾಯಣ, 2016ರಲ್ಲಿಯೂ ರಾಜ್ಯ ಸರ್ಕಾರ ಕೊಡಮಾಡುವ ಬಹುಮಾನಕ್ಕಾಗಿ ಅಗತ್ಯ ದಾಖಲಾತಿ ನೀಡಿದ್ದರು. ಅಂದಿನ ಪ್ರಶಸ್ತಿ ಮೊತ್ತ 8 ಲಕ್ಷ ರೂ. ಇತ್ತು. ಅಧಿಕಾರಿ ಗಳಿಂದ ಈ ಹಣ ನೀಡುವ ಕುರಿತಂತೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.

ಪ್ರಶಸ್ತಿ ಮೊತ್ತ ಹೆಚ್ಚಳ: ‘ಸ್ವರ್ಣ ವಿಜಯ ದಿವಸ್’ ವರ್ಷಾಚರಣೆ ಅಂಗವಾಗಿ ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಪರಮವೀರ, ಅಶೋಕ ಚಕ್ರ ಪ್ರಶಸ್ತಿ ಮೊತ್ತವನ್ನು -ಠಿ;25 ಲಕ್ಷದಿಂದ 1 ಕೋಟಿ ರೂ.ಗೆ ಹಾಗೂ ‘ಶೌರ್ಯ ಚಕ್ರ’ ಮತ್ತು ‘ವೀರ ಚಕ್ರ’ ಪ್ರಶಸ್ತಿ ಮೊತ್ತವನ್ನು 8 ಲಕ್ಷ ರೂ.ನಿಂದ 25 ಲಕ್ಷ ರೂ.ಗೆ ಹೆಚ್ಚಿಸಿದ್ದರು.

ರಾಜ್ಯ ಸರ್ಕಾರ ಘೊಷಿಸಿರುವ ನಗದು ಬಹುಮಾನ ಪಡೆಯಲು 8 ವರ್ಷದಿಂದ ಸಂಬಂಧಿತ ಇಲಾಖೆಗಳಿಗೆ ಪತ್ರ ಬರೆದು, ಪೂರಕ ದಾಖಲೆ ಸಲ್ಲಿಸುತ್ತಿದ್ದೇನೆ. ಇದೀಗ ಬಹುಮಾನ ಮೊತ್ತವಾಗಿ ಕೇವಲ 25 ರೂ. ನಗದು ಬಿಡುಗಡೆ ಮಾಡುವಂತೆ ಸರ್ಕಾರದ ಅಧೀನ ಕಾರ್ಯದರ್ಶಿ ಸೂಚಿಸಿರುವುದು ತೀವ್ರ ಬೇಸರ ತಂದಿದೆ. | ಕ್ಯಾಪ್ಟನ್ ನಾರಾಯಣ ಅತ್ತಿಮರದ ಶೌರ್ಯ ಚಕ್ರ ಪುರಸ್ಕೃತರು

148 ಸೈನಿಕರ ಜೀವ ರಕ್ಷಿಸಿದ್ದ ಅತ್ತಿಮರದ

ಇಂಡೋ-ಪಾಕ್ ಯುದ್ಧ ಸಂದರ್ಭದಲ್ಲಿ (1971ರ ಡಿ. 4) ಅರಬ್ಬಿಯನ್ ಸಮುದ್ರದಲ್ಲಿ ಭಾರತೀಯ ನೌಕಾದಳದ ‘ಐಎನ್​ಎಸ್ ಕುಥಾರ್’ ಹೆಸರಿನ ಯುದ್ಧನೌಕೆಯಲ್ಲಿ ತಾಂತ್ರಿಕ ದೋಷ ಕಂಡುಬಂತು. ನೌಕೆಯ ಬಾಯ್ಲರ್ ಕೊಠಡಿಯಲ್ಲಿನ ಉಗಿ ಪೈಪ್ ಸ್ಪೋಟಗೊಂಡು ಚಾಲನೆಯಲ್ಲಿದ್ದ ನೌಕೆಯ ಬಾಯ್ಲರ್​ನ ಉಷ್ಣಾಂಶ 398.5 ಡಿಗ್ರಿ ಸೆಂಟಿಗ್ರೇಡ್​ನಷ್ಟು ಹೆಚ್ಚಾಗಿ ಕೆಲ ನಿಮಿಷಗಳಲ್ಲಿ ನೌಕೆ ಸಂಪೂರ್ಣವಾಗಿ ಸ್ಪೋಟಗೊಳ್ಳುವ ಸಂಭವ ಇತ್ತು. ಈ ವೇಳೆ ನೌಕೆಯಲ್ಲಿದ್ದ ಇಂಜಿನಿಯರಿಂಗ್ ಮೆಕ್ಯಾನಿಕ್ ನಾರಾಯಣ ಅತ್ತಿಮರದ ತಮ್ಮ ಜೀವದ ಹಂಗು ತೊರೆದು ಬಾಯ್ಲರ್ ಕೊಠಡಿಗೆ ನುಗ್ಗಿದರು. ದಟ್ಟವಾಗಿ ಆವರಿಸಿದ್ದ ಹೊಗೆ ನಡುವೆ ಕಾರ್ಯನಿರ್ವಹಿಸಿ, ಪರಿಸ್ಥಿತಿಯನ್ನು ತಹಬದಿಗೆ ತಂದರು. ಆ ಮೂಲಕ ನೌಕೆಯಲ್ಲಿದ್ದ 30 ಹಿರಿಯ ನೌಕಾಧಿಕಾರಿಗಳು ಸೇರಿ ಎಲ್ಲ 148 ಸೈನಿಕರ ಜೀವ ರಕ್ಷಿಸಿದ್ದರು. ಈ ಸಾಹಸಕ್ಕಾಗಿ ಅಂದಿನ ಕೇಂದ್ರ ಸರ್ಕಾರ ಅತ್ತಿಮರದಗೆ 1972ರ ಏಪ್ರಿಲ್ 1ರಂದು ‘ಶೌರ್ಯ ಚಕ್ರ’ ಪ್ರಶಸ್ತಿ ನೀಡಿ ಗೌರವಿಸಿತ್ತು.