ತೇರದಾಳ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಪೌರಕಾರ್ಮಿಕರು ಪುರಸಭೆ ಆವರಣದಲ್ಲಿ ಶುಕ್ರವಾರ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡರು.
ಪೌರಕಾರ್ಮಿಕ ಸ್ಥಳೀಯ ಸಂಘಟನೆ ಅಧ್ಯಕ್ಷ ರಘು ಗೊಟಡಕಿ, ದಯಾನಂದ ಮಾಂಗ, ಮಂಜುನಾಥ ರಾಯಣ್ಣವರ ಮಾತನಾಡಿ,ಪುರಸಭೆಯಲ್ಲಿ 40 ಜನರು ಕೆಲಸ ಮಾಡುತ್ತಿದ್ದು, ನಾಲ್ಕು ತಿಂಗಳಿಂದ ವೇತನ ನೀಡಿಲ್ಲ. ಸರ್ಕಾರದ ಯೋಜನೆಗಳಾದ ಶೇ.17ರ ವೇತನ, ಗಳಿಕೆ ರಜೆ, 21 ದಿನದ ಬತ್ಯೆ, ಸಂಕಷ್ಟ ಬತ್ಯೆ(ಎನ್.ಪಿ.ಎಸ್. ತುಂಬುವ), ದೀಪಾವಳಿ ಬೋನಸ್ ಸಹ ನೀಡದೇ ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗಳು, ಯೋಜನಾ ಅಧಿಕಾರಿ(ಪಿಡಿ), ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.
ಪೌರಕಾರ್ಮಿಕರಿಗೆ ಮಾಸ್ಕ್, ಗ್ಲೌಸ್, ಸುರಕ್ಷಾ ವಸ್ತುಗಳನ್ನು ನೀಡಿಲ್ಲ. ನಮ್ಮ ಕುಟುಂಬ ಬೀದಿಗೆ ಬೀಳುವಂತಾಗಿದ್ದು, ಮಕ್ಕಳ ಶಾಲಾ ಶುಲ್ಕ, ಸಾಲದ ಹೊರೆ ಸೇರಿ ಬದುಕು ಕಠಿಣವಾಗುತ್ತಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಹಣವಿಲ್ಲ. ರಾಜ್ಯದ ವಿವಿಧೆಡೆ ಎಲ್ಲ ಸೌಲಭ್ಯಗಳನ್ನು ನೀಡುತ್ತಿದ್ದರೂ ಇಲ್ಲಿ ನಮಗೆ ಯಾವುದನ್ನೂ ನೀಡುತ್ತಿಲ್ಲ. ಆದ್ದರಿಂದ ಸರ್ಕಾರದಿಂದಲೇ ನಮಗೆ ವೇತನವಾಗುವಂತ ವ್ಯವಸ್ಥೆ ಮಾಡಬೇಕು. ವೇತನ ಸೇರಿ ಸರ್ಕಾರದ ಎಲ್ಲ ಸೌಲಭ್ಯಗಳು ಸಿಗುವವರೆಗೂ ಹೋರಾಟ ಮುಂದುವರಿಸುವುದಾಗಿ ಎಚ್ಚರಿಸಿದರು.
ಸಂಜು ಹಟ್ಟೆನ್ನವರ, ಶಂಭು ಮಾಸ್ತಿ, ದಯಾನಂದ ಮಾಂಗ, ಗೌರವ್ವ ಮಾಸ್ತಿ, ಸಾವಿತ್ರಿ ರಾಯನ್ನವರ ಮತ್ತಿತರರಿದ್ದರು.
ಪೌರಕಾರ್ಮಿಕರು ನಮ್ಮೂರಿನ ಸ್ವಚ್ಛತೆ ಮಾಡುವ ಪುರಸಭೆಯ ಪ್ರಮುಖ ಸೇವಕರಾಗಿದ್ದಾರೆ. ಹಾಗಾಗಿ ಅವರಿಗೆ ಸರಿಯಾದ ವೇತನ ಕೊಡಬೇಕಾಗಿದೆ. ಆದರೆ ಸ್ಥಳೀಯ ಸಂಸ್ಥೆಗಳಿಂದ ವೇತನ ಕೊಡಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ವಾರ್ಷಿಕವಾಗಿ ಬರುವ ಆದಾಯವು 2.12 ಕೋಟಿ ರೂ.ಗಳಾಗಿದ್ದರೆ, 2,7 ಕೋಟಿ ರೂ. ಖರ್ಚು ಇದೆ. ಮತ್ತು ಮೆಂಟೆನನ್ಸ್‌ಗಾಗಿ 2 ಕೋಟಿಯಷ್ಟು ಖರ್ಚಿದೆ. ಆದಕಾರಣ ರಾಜ್ಯ ಸರ್ಕಾರವು ಪೌರಕಾರ್ಮಿಕರ ವೇತನವನ್ನು ನೇರವಾಗಿ ಪಾವತಿಸುವ ವ್ಯವಸ್ಥೆ ಮಾಡಬೇಕಾಗಿದೆ.
ಶಿಲ್ಪಾ ಗೌತಮ ರೋಡಕರ, ಅಧ್ಯಕ್ಷರು, ಪುರಸಭೆ ತೇರದಾಳ