ಚಿಕ್ಕಮಗಳೂರು: ಶಿಕ್ಷಣ ವ್ಯವಸ್ಥೆಯಲ್ಲಿ ಹಲವು ಲೋಪ ದೋಷಗಳಿದ್ದು ಅವುಗಳನ್ನು ಸರಿಪಡಿಸುವ ಜತೆಗೆ ಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಲು ಸಂಕಲ್ಪ ಮಾಡಿ ನೈಋತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ ಎಂದು ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಭಾಸ್ಕರ್‌ಶೆಟ್ಟಿ ತಿಳಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 30 ವರ್ಷಗಳಿಗೂ ಹೆಚ್ಚು ಕಾಲದಿಂದ ಶಿಕ್ಷಣ ಕ್ಷೇತ್ರದಲ್ಲಿ ಪ್ರಾಥಮಿಕ ಶಾಲೆಯಿಂದ ಪದವಿಪೂರ್ವ ಕಾಲೇಜು, ಕ್ಷೇತ್ರ ಶಿಕ್ಷಣಾಧಿಕಾರಿ, ಪ್ರಭಾರಿ ಉಪನಿರ್ದೇಶಕರಾಗಿ ವಿವಿಧ ಹಂತದಲ್ಲಿ ಸೇವೆ ಸಲ್ಲಿಸಿ ಶಿಕ್ಷಣ ಕ್ಷೇತ್ರದಲ್ಲಿನ ಸಮಸ್ಯೆಗಳು ಹಾಗೂ ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳ ಅರಿವಿದೆ. ಇವುಗಳನ್ನು ಪರಿಹರಿಸುವ ಉದ್ದೇಶದಿಂದ ಚುನಾವಣೆಗೆ ಸ್ಪರ್ಧಿಸಿದ್ದೇನೆ ಎಂದರು.
ಪ್ರಸ್ತುತ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲ ವರ್ಗದ ಶಿಕ್ಷಕರು ಬಡ್ತಿ, ಮುಂಬಡ್ತಿ ಅವಕಾಶದಿಂದ ವಂಚಿತರಾಗಿದ್ದಾರೆ. ವರ್ಗಾವಣೆ, ನಿಯೋಜನೆಗಳಲ್ಲಿ ವ್ಯಾಪಕ ತಾರತಮ್ಯವಿದೆ. ಇವುಗಳನ್ನು ಸರಿಪಡಿಸಲು ಇಲ್ಲಿಯವರೆಗೂ ಯಾರೂ ಪ್ರಯತ್ನಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಶಿಕ್ಷಣ ಕ್ಷೇತ್ರದಲ್ಲಿನ ಸಂಪೂರ್ಣ ಅರಿವಿನೊಂದಿಗೆ ಸುದೀರ್ಘ ಅನುಭವ ಹೊಂದಿರುವ ನಾನು ಶಿಕ್ಷಕ ಸಮೂಹದ ಪರವಾಗಿ ಪ್ರಾಮಾಣಿಕ ಸೇವೆ ಸಲ್ಲಿಸುವ ಉದ್ದೇಶದಿಂದ ಚುನಾವಣೆಗೆ ಸ್ಪರ್ಧಿಸಿದ್ದೇನೆ. ತಮ್ಮ ಅನುಭವವನ್ನು ಆಧರಿಸಿ ಶಿಕ್ಷಕರ ಸೇವೆ ಮಾಡಲು ಆಶೀರ್ವದಿಸುವಂತೆ ಮನವಿ ಮಾಡಿದರು.
ನನನ್ನು ಆಯ್ಕೆ ಮಾಡಿದಲ್ಲಿ ಪಠ್ಯಪುಸ್ತಕಗಳ ಗೊಂದಲ, ವೇತನ ಹಾಗೂ ಬಡ್ತಿ-ಮುಂಬಡ್ತಿ ತಾರತಮ್ಯ ಸರಿಪಡಿಸುವ ಜತೆಗೆ ಎಲ್ಲ ಹಂತದ ಶಿಕ್ಷಕರ ಸಮಸ್ಯೆ ಪರಿಹರಿಸುವ ಸಂಕಲ್ಪ ಮಾಡಿದ್ದೇನೆ ಎಂದರು. ಪ್ರಮುಖರಾದ ಡಾ. ಸುಬ್ಬಣ್ಣಶೆಟ್ಟಿ, ಗಣೇಶ್ ಉಪಸ್ಥಿತರಿದ್ದರು.