ಮಡಿಕೇರಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬಸವ ಜಯಂತಿಯನ್ನು ಭಾನುವಾರ ಸರಳವಾಗಿ ಆಚರಿಸಲಾಯಿತು.
ನಗರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡರವರು ದೀಪ ಬೆಳಗಿ, ಪುಷ್ಪನಮನ ಸಲ್ಲಿಸಿ, ಗೌರವ ಸಲ್ಲಿಸಿದರು.
ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕ ಬಸಪ್ಪ ಮಾತನಾಡಿ, ಬಸವೇಶ್ವರರು ಎಲ್ಲಾ ಸಮಾಜದವರನ್ನೂ ಅನುಭವ ಮಂಟಪದ ಪ್ರಜಾಪ್ರಭುತ್ವದ ವೇದಿಕೆಗೆ ತಂದು ಅಭಿವ್ಯಕ್ತಿ ಸ್ವಾತಂತ್ರ್ಯದ ಚರ್ಚಾ ವೇದಿಕೆಯಾಗಿ ಬೆಳೆಸಿದರು. ಇಡೀ ಶರಣ ಚಳುವಳಿಯ ಮಹಾಚೇತನರಾಗಿ ಬಸವೇಶ್ವರರು ೧೨ನೇ ಶತಮಾನದಲ್ಲಿ ಬೆಳಕು ಕಂಡಿದರು. ಬಸವಣ್ಣ ಎಂಬ ವ್ಯಕ್ತಿತ್ವದ ಮತ್ತು ಶರಣ ಚಳುವಳಿಯ ಮಹಾನಡೆಯ ಸಂಗಮತ್ವವನ್ನು ಸದಾ ಸ್ಮರಿಸಬೇಕಿದೆ. ಬಸವಣ್ಣರವರು ಮಹಾ ಮಾನವತಾವಾದಿಯಾಗಿ ಕಟ್ಟಿ ಬೆಳೆಸಿದ ಚಳವಳಿ ಕನ್ನಡ ನೆಲದಲ್ಲಿ ಹುಟ್ಟಿ ಬೆಳೆದ ಶರಣ ಚಳವಳಿಯಾಗಿದೆ. ಕಾಯಕ, ದಾಸೋಹ ಮೂಲಕ ಸಮಾಜದಲ್ಲಿ ಸಮಾನತೆ ತರಲು ಬಸವೇಶ್ವರರು ಶ್ರಮಿಸಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಸಿ.ರಂಗಧಾಮಯ್ಯ ಜಿಲ್ಲಾ ನೋಂದಣಾಧಿಕಾರಿ ಸಿದ್ದೇಶ್, ಕೃಷಿ ಇಲಾಖೆಯ ಉಪ ನಿರ್ದೇಶಕ ರಂಗರಾವ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ, ಮಣಜೂರು ಮಂಜುನಾಥ್ ಇತರರು ಇದ್ದರು.