ಬೆಂಗಳೂರು: ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಿರುವ ಕಾಂಗ್ರೆಸ್ನ 2ನೇ ಅಭ್ಯರ್ಥಿ ಯಾವುದೇ ಕಾರಣಕ್ಕೂ ನಾಮಪತ್ರ ಹಿಂಪಡೆಯಲ್ಲ. ನಮಗೆ ಆತ್ಮಸಾಕ್ಷಿ ಮತಗಳಿವೆ.
ಬೇರೆ ಪಕ್ಷದ ಕೆಲ ಶಾಸಕರು ಆತ್ಮಸಾಕ್ಷಿಯಿಂದ ನಮಗೆ ಮತ ಹಾಕುತ್ತಾರೆ. ಹೈಕಮಾಂಡ್ ಸೂಚನೆಯಂತೆ ಎರಡನೇ ಅಭ್ಯರ್ಥಿ ಹಾಕಿದ್ದೇವೆ. ನಾವು ಯಾವುದೇ ಕಾರಣಕ್ಕೂ ಅಭ್ಯರ್ಥಿಯನ್ನು ಹಿಂಪಡೆಯಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಘೋಷಿಸಿದ್ದಾರೆ.
ವಿಧಾನಸಭೆಯಿಂದ ರಾಜ್ಯಸಭೆಗೆ ಚುನಾವಣೆಯಲ್ಲಿ 4ನೇ ಅಭ್ಯರ್ಥಿ ಆಯ್ಕೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ಗೆ ಕಂಗ್ಗಾಂಟಾಗಿ ಪರಿಣಮಿಸಿದೆ. ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡು ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಶತಾಯಗತಾಯ ಪ್ರಯತ್ನಿಸುತ್ತಲೇ ಇದ್ದಾರೆ. ಆದರೆ ಮಾತುಕತೆ ಇನ್ನೂ ಫಲಿಸಿಲ್ಲ. ನಾಮಪತ್ರ ಹಿಂಪಡೆಗೆ ಇಂದು ಕೊನೇ ದಿನ. ಡೆಡ್ಲೈನ್ ಮುಗಿಯುವ ಮೊದಲೇ ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ, ನಮ್ಮ ಅಭ್ಯರ್ಥಿ ಗೆಲ್ಲೋದು ನಿಶ್ಚಿತ. ಯಾರ ಬಳಿಯೂ ಪೂರ್ಣ ಸಂಖ್ಯಾಬಲ ಇಲ್ಲ. ನಮಗೆ ನಮ್ಮ ಅಭ್ಯರ್ಥಿ ಗೆಲ್ಲುವ ವಿಶ್ವಾಸವಿದೆ. ಎರಡನೇ ಪ್ರಾಶಸ್ತ್ಯ ಮತಗಳು ನಮಗೂ ಇವೆ. ನಾವು ಗೆಲ್ತೀವಿ. ನಮಗೆ ಬೇರೆ ಪಕ್ಷದವರು ಮತ ಹಾಕ್ತಾರೆ. ಯಾವುದೇ ಕಾರಣಕ್ಕೂ ಅಭ್ಯರ್ಥಿಯನ್ನು ಹಿಂಪಡೆಯಲ್ಲ ಎಂದರು.
ದೇವೇಗೌಡರು ಮನಸು ಮಾಡಿದ್ರೆ ಕಾಂಗ್ರೆಸ್ ಅಥವಾ ಬಿಜೆಪಿ ಬೆಂಬಲ ಸಿಕ್ಕೇ ಸಿಗುತ್ತೆ ಎಂಬ ಚರ್ಚೆ ಇನ್ನೂ ನಡೆಯುತ್ತಲೇ ಇದೆ. ಯಾವ ಪಕ್ಷದ ಹೈಕಮಾಂಡ್ ಜೊತೆ ದೇವೇಗೌಡರು ಮಾತುಕತೆ ನಡೆಸ್ತಾರೆ? ಕೊನೇ ಕ್ಷಣದಲ್ಲಿ ಏನೆಲ್ಲಾ ಮಹತ್ತರ ಬೆಳವಣಿಗೆ ಆಗಬಹುದು ಎಂಬ ಕುತೂಹಲ ಮೂರು ಪಕ್ಷ ಮಾತ್ರವಲ್ಲ ಸಾರ್ವಜನಿಕ ವಲಯದಲ್ಲೂ ಇದೆ.