ಜಿಲ್ಲೆ

ವಿಪಕ್ಷದವರ ಮೇಲೆ ಇಡಿ, ಐಟಿ ಇಲಾಖೆಯನ್ನ ಕೇಂದ್ರ ಸರ್ಕಾರ ಛೂ ಬಿಡ್ತಿದೆ... ED ಕಚೇರಿ ಎದುರು ಸಿದ್ದು ಆಕ್ರೋಶ

ಬೆಂಗಳೂರು: ವಿಪಕ್ಷದವರ ಮೇಲೆ ಇಡಿ, ಐಟಿ ಇಲಾಖೆಯನ್ನ ಕೇಂದ್ರ ಸರ್ಕಾರ ಛೂ ಬಿಡ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ನ್ಯಾಷನಲ್​ ಹೆರಾಲ್ಡ್​ ಪ್ರಕರಣ ಸಂಬಂಧ ಸೋನಿಯಾ ಗಾಂಧಿ ಮತ್ತು ರಾಹುಲ್​ ಗಾಂಧಿಗೆ ಇಡಿ ಸಮನ್ಸ್​ ಜಾರಿ ಮಾಡಿದೆ. ಈ ಹಿನ್ನೆಲೆ ಅವರಿಬ್ಬರೂ ವಿಚಾರಣೆಗೆ ಹಾಜರಾಗಿದ್ದಾರೆ. ವಿಪಕ್ಷದವರನ್ನ ಹಣಿಯಲ್ಲಿ ಬಿಜೆಪಿ ಸರ್ಕಾರ, ಇಡಿ-ಐಟಿಯನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿ ದೇಶಾದ್ಯಂತ ಕಾಂಗ್ರೆಸ್​ ಬೀದಿಗಳಿದು ಹೋರಾಟ ನಡೆಸುತ್ತಿದೆ. ಬೆಂಗಳೂರಿನ ಇಡಿ ಕಚೇರಿ ಎದರಲ್ಲೂ ಡಿಕೆಶಿ ಮತ್ತು ಸಿದ್ದರಾಮಯ್ಯ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ದ್ವೇಷದ ರಾಜಕಾರಣವನ್ನ ಬಿಜೆಪಿ ಇಲ್ಲಿಗೆ ನಿಲ್ಲಿಸಬೇಕು. ಇಲ್ಲವಾದರೆ ಕಾಂಗ್ರೆಸ್​ ಕಾರ್ಯಕರ್ತರು ತಕ್ಕಶಾಸ್ತಿ ಮಾಡುತ್ತಾರೆ. ಕೇಂದ್ರ ಸರ್ಕಾರ ಶಾಶ್ವತವಾಗಿ ಅಧಿಕಾರದಲ್ಲೇ ಗೂಟ ಹೊಡೆದುಕೊಂಡು ಕೂರಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.

ಆರ್‌ಎಸ್‌ಎಸ್ ಮುಖಂಡರು ಬ್ರಿಟಿಷರ ಜತೆ ಸೇರಿಕೊಂಡು ಸಂಚು ರೂಪಿಸಿದ್ದರು. ಕ್ವಿಟ್ ಇಂಡಿಯಾ ಚಳವಳಿ ಹತ್ತಿಕ್ಕಲು ಕೈಜೋಡಿಸಿದ್ದರು. ಬಿಜೆಪಿಯವರು ಎಲ್ಲಾದರೂ ತ್ಯಾಗ, ಬಲಿದಾನ ಮಾಡಿದ್ದಾರಾ? ಬಿಜೆಪಿಯವರು ದೇಶಭಕ್ತರಂತೆ ನಾಟಕ ಮಾಡುತ್ತಾರೆ. ರಾಜ್ಯದಲ್ಲಿ ಶೇ.40 ಕಮಿಷನ್ ಆರೋಪ ಬಂದಿತ್ತು. ಖುದ್ದು ಮೋದಿಗೂ ದೂರು ನೀಡಲಾಗಿತ್ತು. ಆಗ ಯಾರ ಮೇಲಾದರೂ ದಾಳಿ ಮಾಡಿದ್ದರೇ? ಕಮಿಷನ್ ದಂಧೆಯಲ್ಲಿ ಭಾಗಿಯಾದವರ ಮೇಲೆ ದಾಳಿಯಾಗಿದೆಯೇ? ಈಗ ನಮ್ಮ ಮೇಲೆ ಛೂ ಬಿಟ್ಟಿದ್ದಾರೆ. ಇವರಿಗೆ ನಾಚಿಕೆ, ಮಾನ, ಮರ್ಯಾದೆ ಯಾವುದೂ ಇಲ್ಲ ಎಂದು ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದರು.

ಇಡಿ-ಐಟಿ ದಾಳಿ ಮಾಡಿಸಿದಾಕ್ಷಣ ನಮ್ಮವರು ಆತ್ಮಸ್ಥೈರ್ಯ ಕಳೆದುಕೊಳ್ಳಲ್ಲ. ಇದು ಸಾಂಕೇತಿಕ ಮುಷ್ಕರವಷ್ಟೆ. ಇಡೀ ದೇಶದಲ್ಲಿ ಕೋಟ್ಯಂತರ ಕಾಂಗ್ರೆಸ್​ ಕಾರ್ಯಕರ್ತರು ಬೀದಿಗೆ ಬರುತ್ತಾರೆ, ಬಿಜೆಪಿ ಸರ್ಕಾರ ನಡೆಯದಂತೆ ಮಾಡುತ್ತಾರೆ.‌ ಸರ್ಕಾರಿ ಕಚೇರಿಗಳನ್ನ ಬಂದ್ ಮಾಡುತ್ತಾರೆ ಎಂದು ಸಿದ್ದರಾಮಯ್ಯ ಎಚ್ಚರಿಸಿದರು.

ಪ್ರತಿಭಟನೆ ವೇಳೆ ನೂಕು ನುಗ್ಗಾಟ ಏರ್ಪಟ್ಟ ಪರಿಣಾಮ ವೇಣುಗೋಪಲ್​ ಅಸ್ವಸ್ತರಾದರು. ಪೊಲೀಸರು ಸಿದ್ದರಾಮಯ್ಯ, ಡಿಕೆಶಿ ಸೇರಿದಂತೆ ಹಲವರನ್ನ ವಶಕ್ಕೆ ಪಡೆದರು.