ಗುಂಡ್ಲುಪೇಟೆ: ತಾಲೂಕಿನ ಪುಣ್ಯಕ್ಷೇತ್ರವಾದ ಗದ್ದುಗಲ್ ದೇವಾಲಯದ ಸುತ್ತಲಿನ ಆವರಣ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದ್ದು, ಭಕ್ತರು ಕಿರಿಕಿರಿ ಅನುಭವಿಸುವಂತಾಗಿದೆ.
ಗದ್ದುಗಲ್ ಬೆಟ್ಟ ಎಂದು ಕರೆಯಲ್ಪಡುವ ಗುಡ್ಡದ ಎತ್ತರದ ಪ್ರದೇಶದಲ್ಲಿನ ಬಂಡೆಗಳ ನಡುವಿನ ಗುಹೆಯಲ್ಲಿ ಪವಾಡ ಪುರುಷ ಸಿದ್ದಪ್ಪಾಜಿ ಹಾಗೂ ರಾಚಪ್ಪಾಜಿ ತಪಸ್ಸು ಮಾಡಿದ್ದರು ಎಂಬ ನಂಬಿಕೆ ಭಕ್ತರಲ್ಲಿದೆ. ಪ್ರತಿ ಸೋಮವಾರ ಹಾಗೂ ಶುಕ್ರವಾರ ದೇವಲಯದಲ್ಲಿ ವಿಶೇಷ ಪೂಜೆ ನಡೆಯಲಿದೆ. ಕಂದೇಗಾಲ, ಶಿಂಡನಪುರ, ಮೊಳ್ಳಯ್ಯನಹುಂಡಿ, ಬೆಟ್ಟಹಳ್ಳಿ, ಹೊಸೂರು, ಕೊಡಸೋಗೆ, ಸೋಮನಪುರ ಶೀಲವಂತಪುರ ಸೇರಿದಂತೆ ಸುತ್ತಮುತ್ತಲಿನ ಸಿದ್ದಪ್ಪಾಜಿ ಗುಡ್ಡರು ಇಲ್ಲಿಗೆ ಬಂದು ಸೇವೆ ಸಲ್ಲಿಸುವುದು ವಾಡಿಕೆ.
ಪಟ್ಟಣದಿಂದ 15 ಕಿಮೀ ಅಂತರದಲ್ಲಿರುವ ಈ ಗುಡ್ಡದಲ್ಲಿ ಜನಸಂಚಾರ ವಿರಳವಾಗಿದ್ದು, ನಿತ್ಯ ಮೋಜು ಮಸ್ತಿ ಹಾಗೂ ಜೂಜಾಟ ಹೆಚ್ಚಾಗುತ್ತಿದೆ. ಬೆಳಗ್ಗೆ ಆಟೋ, ಬೈಕು, ಕಾರುಗಳಲ್ಲಿ ಬರುವ ಯುವಕರು ಗುಂಪು ಉಂಪಾಗಿ ಮರದ ನೆರಳಿನಲ್ಲಿ ಮಾಂಸಾಹಾರ ಸಿದ್ಧಪಡಿಸಿ ಮದ್ಯಪಾನ ಮಾಡುತ್ತಾರೆ. ಬಯಲು ಬಾರ್ ಆಗಿ ಪರಿವರ್ತನೆಯಾಗುತ್ತಿದೆ. ಅಲ್ಲದೆ ಕುಡಿದ ಮತ್ತಿನಲ್ಲಿ ಗಾಜಿನ ಬಾಟಲಿಗಳನ್ನು ಒಡೆಯುವುದು, ಮದ್ಯದ ಪೌಚ್‌ಗಳು, ಪ್ಲಾಸ್ಟಿಕ್ ಬಾಟಲಿಗಳನ್ನು ಎಲ್ಲೆಂದರಲ್ಲಿ ಬಿಸಾಡಿ ಹೋಗುತ್ತಾರೆ. ಪರಿಣಾಮ ದಾರಿಯುದ್ದಕ್ಕೂ ಟನ್‌ಗಟ್ಟಲೇ ತ್ಯಾಜ್ಯ ಬೀಳುತ್ತಿದ್ದು ಮಳೆಗಾಲದಲ್ಲಿ ನೀರು ಹರಿಯುವ ಹಳ್ಳಕೊಳ್ಳಗಳೂ ಮುಚ್ಚಿಹೋಗುತ್ತಿವೆ.
ಅವಘಢ ಸಂಭವಿಸುವ ಮುನ್ನ ಅರಣ್ಯ ಇಲಾಖೆಯಾಗಲೀ ಅಥವಾ ಪೊಲೀಸರಾಗಲಿ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಿ ಟನ್‌ಗಟ್ಟಲೇ ಹರಡಿರುವ ಪ್ಲಾಸ್ಟಿಕ್ ತೆರೆವುಗೊಳಿಸಿ ದೇವಾಲಯದ ಪಾವಿತ್ರ್ಯಕ್ಕೆ ಧಕ್ಕೆಯಾಗದಂತೆ ಕ್ರಮಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯ.
ಜಾನುವಾರುಗಳಿಗೆ ಪ್ರಮುಖ ಮೇವಿನ ತಾಣ: ಅರಣ್ಯ ಇಲಾಖೆಯ ಬಫರ್ ವಲಯಕ್ಕೆ ಸೇರಿದ ಈ ಪ್ರದೇಶವು ಸ್ಕಂದಗಿರಿ ಪಾರ್ವತಾಂಬಾ ಬೆಟ್ಟದ ಸಮೀಪದಲ್ಲಿದೆ. ತಾಲೂಕಿನಲ್ಲಿ ಹರಿಯುತ್ತಿದ್ದ ಗುಂಡ್ಲುನದಿಗೆ ಗೋಪಾಲಸ್ವಾಮಿ ಬೆಟ್ಟ ಒಂದು ಜಲಮೂಲವಾಗಿದ್ದರೆ 13,065 ಹೆಕ್ಟೇರ್ ವಿಸ್ತೀರ್ಣವಿರುವ ಸೆಕ್ಷನ್ 4 ಗುಡ್ಡವೂ ಮತ್ತೊಂದು ಪ್ರಮುಖ ಮೂಲವಾಗಿದೆ. ಈ ಭಾಗಕ್ಕೆ ಬಿದ್ದ ಮಳೆನೀರು ಹತ್ತಾರು ಕಾಲುವೆಗಳ ಮೂಲಕ ಗುಂಡ್ಲು ನದಿಯನ್ನು ಸೇರುತ್ತಿದೆ. ಅರಣ್ಯ ಇಲಾಖೆ ಹುಲಿ ಗಣತಿ ಸಂದರ್ಭದಲ್ಲಿ ಈ ಭಾಗದಲ್ಲಿ ಅಳವಡಿಸಿದ್ದ ಕ್ಯಾಮರಾಗಳಲ್ಲಿ ಎರಡು ಹುಲಿಗಳು ಹಾಗೂ ನಾಲ್ಕಾರು ಚಿರತೆಗಳು ಸಂಚರಿಸುತ್ತಿದ್ದದ್ದು ಸೆರೆಯಾಗಿತ್ತು. ಎತ್ತರವಾದ ಗುಡ್ಡದ ಮೇಲೆ ದಟ್ಟವಾದ ಮರಗಳು ಬೆಳೆದು ಸುತ್ತಮುತ್ತಲಿನ ಗ್ರಾಮಗಳ ಜಾನುವಾರುಗಳಿಗೆ ಪ್ರಮುಖ ಮೇವಿನ ತಾಣವಾಗಿದೆ.
ಇಲ್ಲಿಗೆ ಮೋಜು ಮಸ್ತಿ ಹಾಗೂ ಇಸ್ಪೀಟು ಆಡಲು ಬರುವವರಿಂದ ದೇವಾಲಯದ ಪಾವಿತ್ರೃ ಹಾಳಾಗುತ್ತಿದೆ. ಮಹಿಳೆಯರು ದೇವಾಲಯಕ್ಕೆ ಹೋಗಲು ಭಯಪಡುತ್ತಿದ್ದಾರೆ. ಜಾನುವಾರುಗಳು ಹಾಗೂ ವನ್ಯಜೀವಿಗಳೂ ಪ್ಲಾಸ್ಟಿಕ್ ಸೇವಿಸಿ ತೊಂದರೆಗೊಳಗಾಗುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಸ್ಥಳೀಯರು ಮುಂದಾದರೂ ಯಾವುದೇ ಉಪಯೋಗವಾಗುತ್ತಿಲ್ಲ. ನಿರ್ಜನ ಪ್ರದೇಶದಲ್ಲಿರುವ ಗುಡ್ಡದಲ್ಲಿ ಮರಗಳ್ಳತನ ನಿರಂತರವಾಗಿ ನಡೆಯುತ್ತಿದ್ದು, ಬೆಳಗ್ಗೆ 9ರಿಂದ ಸಂಜೆ 5 ರ ನಂತರ ಆಟೋಗಳಲ್ಲಿ ಬರುವ ಮರಗಳ್ಳರು ಯಾಂತ್ರಿಕ ಗರಗಸ ಬಳಸಿ ಮರಗಳನ್ನು ಕತ್ತರಿಸಿ ಕೊಂಡೊಯ್ಯುತ್ತಿದ್ದಾರೆ. ಅರಣ್ಯ ಇಲಾಖೆಯವರಾಗಲೇ ಅಥವಾ ಪೊಲೀಸರಾಗಲೀ ಇತ್ತ ತಲೆ ಹಾಕುತ್ತಿಲ್ಲ. ಇದರಿಂದ ಅನೈತಿಕ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತಿವೆ.
ಶಂಕರಪ್ಪ ಗ್ರಾಮಸ್ಥ, ಕಂದೇಗಾಲ
ಈ ಗುಡ್ಡದ ಉಸ್ತುವಾರಿಗೆ ಒಬ್ಬ ಉಪ ವಲಯಾರಣ್ಯಾಧಿಕಾರಿ ಹಾಗೂ ಗಾರ್ಡ್‌ಗಳನ್ನು ನಿಯೋಜಿಸಲಾಗಿದೆ. ಇಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗುವುದು.
ಎನ್.ಪಿ.ನವೀನ್ ಕುಮಾರ್ ಪ್ರಭಾರ ಆರ್‌ಎಫ್‌ಒ ಬಫರ್ ವಲಯ