ಜಿಲ್ಲೆ

ಸಿನಿಮಾ ರಂಗದಲ್ಲಿ ಕೃತಕ ಬುದ್ಧಿಮತ್ತೆಯ ಅವಶ್ಯಕತೆ ಇದೆಯೇ? : ಚಿಂತನೆ ಅಗತ್ಯ ಎಂದ ಪ್ರಕಾಶ್ ಬೆಳವಾಡಿ

ಮೈಸೂರು: ಸಿನಿಮಾ ರಂಗದಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆಯಿಂದ ಸಿನಿಮಾ ರಂಗವನ್ನೇ ನಂಬಿಕೊಂಡಿರುವ ಹಲವರು ಸಮಸ್ಯೆಗೆ ಸಿಲುಕುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆ ಕುರಿತು ಗಂಭೀರವಾದ ಚಿಂತನೆ ಅವಶ್ಯಕತೆ ಇದೆ ಎಂದು ನಟ ಪ್ರಕಾಶ್ ಬೆಳವಾಡಿ ಹೇಳಿದರು.

ಮೈಸೂರು ಸಿನೆಮಾ ಸೊಸೈಟಿಯು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪರಿದೃಶ್ಯ ಅಂತಾರಾ ಷ್ಟ್ರೀಯ ಕಿರುಚಿತ್ರ ಹಾಗೂ ಸಾಕ್ಷಾೃಚಿತ್ರಗಳ ಹಬ್ಬ ಉದ್ಘಾಟಿಸಿ ಮಾತನಾಡಿ, ಕೃತಕ ಬುದ್ಧಿಮತ್ತೆಯು ಸಿನಿಮಾ ರಂಗಕ್ಕೆ ಸಂಬಂಧಿಸಿದ ಹಲವಾರು ಕೆಲಸಗಳನ್ನು ನಿರ್ವಹಿಸಬಲ್ಲದು. ಹೀಗಾಗಿ ಸಿನಿಮಾ ರಂಗದಲ್ಲಿ ದುಡಿಯುವವರು ಉದ್ಯೋಗದ ಅನಿಶ್ಚತತೆ ಎದುರಿಸುತ್ತಾರೆ. ಈ ಕಾರಣಕ್ಕೆ ಕೃತಕ ಬುದ್ಧಿಮತ್ತೆಯನ್ನು ಸಿನೆಮಾ ರಂಗದಲ್ಲಿ ಬಳಸಬಾರದು ಎಂದು ಒತ್ತಾಯಿಸಿ ಹಾಲಿವುಡ್‌ನ 11,500 ಬರಹಗಾರರು ಪ್ರತಿಭಟನೆ ನಡೆಸಿದ್ದಾರೆ ಎಂದರು.

ಕೃತಕ ಬುದ್ಧಿಮತ್ತೆಯ ಬಗ್ಗೆ ಸಂಶೋಧನೆ ನಡೆಸಿದ ಜೆಫ್ರಿ ಅವರು ಸಹ ಕೃತಕ ಬುದ್ಧಿಮತ್ತೆಯ ಕುರಿತು ವಿಷಾದದ ಮಾತುಗಳನ್ನು ಆಡಿದ್ದಾರೆ. ನಾನು ಐವತ್ತು ವರ್ಷದಿಂದ ಸಂಶೋಧನೆ ಮಾಡಿದ್ದೇನೆ. ಆದರೆ ಈಗ ಅದರ ಬಗ್ಗೆ ಪಶ್ಚತಾಪ ಪಡುತ್ತಿದ್ದೇನೆ. ಕೃತಕ ಬುದ್ಧಿಮತ್ತೆಯು ಮನುಷ್ಯನ ಅಗತ್ಯತೆಯನ್ನು ಕುಂಠಿತಗೊಳಿಸುತ್ತದೆ ಎಂದು ಜೆಫ್ರಿ ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ನಾವು ಸಹ ಕೃತಕ ಬುದ್ಧಿಮತ್ತೆಯ ಬಳಕೆ ಕುರಿತು ಗಂಭೀರವಾದ ಚಿಂತನೆ ನಡೆಸುವ ಅವಶ್ಯಕತೆ ಇದೆ ಎಂದು ಹೇಳಿದರು.

ತಂತ್ರಜ್ಞಾನದ ವೇಗಕ್ಕೆ ಅನುಗುಣವಾಗಿ ಸಿನೆಮಾದಲ್ಲಿ ಹೊಸತನ ಅಳವಡಿಸಿಕೊಳ್ಳಬೇಕು. ಸಿನಿಮಾ ಇಂದಿನ ಯುಗದ ವೇಗಕ್ಕೆ ಹೊಂದಿಕೊಂಡು ಚಲಿಸಬೇಕಿದೆ. ಆದರೆ, ದೇಶದಲ್ಲಿ ಅಂತಹ ಬದಲಾವಣೆಗಳಿಗೆ ವ್ಯವಸ್ಥೆ ಅವಕಾಶ ಮಾಡಿಕೊಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಶರಣಪ್ಪ ವಿ.ಹಲಸೆ, ಆಯೋಜಕ ಚಂದ್ರಶೇಖರ ಇದ್ದರು.